ADVERTISEMENT

ಆಮ್ಲಜನಕ ಪೂರೈಕೆ: ಮೇಲ್ವಿಚಾರಣೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 19:29 IST
Last Updated 4 ಮೇ 2021, 19:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನಿತ್ಯ ಆಮ್ಲಜನಕದ ಸಿಲಿಂಡರ್‌ ಪೂರೈಕೆಗೆ ಎಷ್ಟು ಬೇಡಿಕೆ ಇದೆ, ಪೂರೈಕೆ ಎಷ್ಟಾಗಿದೆ ಮತ್ತು ಪೂರೈಕೆಗೆ ಎಷ್ಟು ಬಾಕಿ ಇದೆ ಎಂಬುದರ ಮೇಲ್ವಿಚಾರಣೆಗಾಗಿ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಸಮಿತಿ ರಚಿಸಿದ್ದಾರೆ.

ಆಮ್ಲಜನಕ ಪೂರೈಕೆ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಯೊಂದು ಆಮ್ಲಜನಕ ಮರುಪೂರಣ ಸಂಸ್ಥೆಗಳಿಗೆ ನೋಡಲ್ ಅಧಿಕಾರಿಗಳನ್ನು ಹಾಗೂ ಶಿಬಿರ ಅಧಿಕಾರಿಯನ್ನು ನಿಯೋಜಿಸಬೇಕು. ಆಮ್ಲಜನಕ ಪೂರೈಕೆ ಸಂಸ್ಥೆಯಲ್ಲಿರುವ ದಾಸ್ತಾನು ಮತ್ತು ಪೂರೈಕೆ ಕುರಿತು ನಿತ್ಯ ವರದಿ ಮಾಡಬೇಕು ಎಂದು ಸೂಚನೆ ನೀಡಿತ್ತು. ಹಾಗಾಗಿ ಪಾಲಿಕೆಯ ಎಲ್ಲ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರು ತಮ್ಮ ವಲಯ ವ್ಯಾಪ್ತಿಗೆ ಒಳಪಡುವ ಎಲ್ಲ ಆಸ್ಪತ್ರೆಗಳಿಗೆ ಕಂದಾಯ ಅಥವಾ ಎಂಜಿನಿಯರಿಂಗ್ ವಿಭಾಗದಿಂದ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಮುಖ್ಯ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಆಮ್ಲಜನಕದ ಒಟ್ಟು ದಾಸ್ತಾನು, ಆಸ್ಪತ್ರೆಗಳಿಂದ ಸ್ವೀಕರಿಸಿದ ಬೇಡಿಕೆ ಪ್ರಮಾಣ, ಪೂರೈಸಿದ ಪ್ರಮಾಣ ಮತ್ತು ದಾಸ್ತಾನು ಖಾಲಿಯಾಗಿರುವ ಬಗ್ಗೆ ಪ್ರತಿಯೊಬ್ಬ ನೋಡಲ್ ಅಧಿಕಾರಿ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ADVERTISEMENT

‘ಸಣ್ಣ ಆಸ್ಪತ್ರೆಗಳು ಆಮ್ಲಜನಕ ಸಿಲಿಂಡರ್‌ ಮೇಲೆ ಅವಲಂಬಿತರಾಗಿದ್ದಾರೆ. ಈ ಹಿಂದೆ ಒಂದು ಸಿಲಿಂಡರ್‌ ವಾರಗಟ್ಟಲೆ ಬರುತ್ತಿತ್ತು. ಈಗ ಬೇಡಿಕೆ ಹೆಚ್ಚಿದ್ದರಿಂದ ದಿನಕ್ಕೆ ಮೂರು ಸಿಲಿಂಡರ್‌ ಬಳಸಬೇಕಿದೆ. ಆಸ್ಪತ್ರೆಗಳು ಸಾಮರ್ಥ್ಯಕ್ಕೆ ಅನುಗುಣವಾಗಿ ರೋಗಿಗಳನ್ನು ದಾಖಲಿಸಿಕೊಳ್ಳಬೇಕು. ನಾವು ಪರಿಶೀಲಿಸಿದಾಗ ಕೆಲವು ಆಸ್ಪತ್ರೆಗಳು ಸಾಮರ್ಥ್ಯಕ್ಕಿಂತ ಹೆಚ್ಚು ರೋಗಿಗಳನ್ನು ದಾಖಲಿಸಿಕೊಂಡಿದ್ದವು. ಆಸ್ಪತ್ರೆಗೆ ಎಷ್ಟು ರೋಗಿಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ತಿಳಿಯಲು ಬಿಬಿಎಂಪಿ ಸರ್ವೆ ನಡೆಸಲಿದೆ’ ಎಂದು ಗೌರವ್ ಗುಪ್ತ ತಿಳಿಸಿದರು.

‘ನಗರದಲ್ಲಿರುವ ಆಮ್ಲಜನಕ ಪೂರೈಕೆ ಕಂಪನಿಗಳ ಬಳಿಯೂ ಸಿಬ್ಬಂದಿ ನಿಯೋಜನೆ ಮಾಡಲಿದ್ದೇವೆ. ಪ್ರತಿ ಘಟಕದಲ್ಲಿ ಎಷ್ಟು ಆಮ್ಲಜನಕ ಲಭ್ಯವಿದೆ, ಎಷ್ಟು ಬಿಡುಗಡೆಯಾಗಿದೆ, ಎಲ್ಲಿಗೆ ಪೂರೈಕೆ ಆಗಿದೆ ಎಂಬ ಬಗ್ಗೆ ಅವರು ನಿಗಾ ಇಡಲಿದ್ದಾರೆ’ ಎಂದರು.

‘ರೆಮಿಡಿಸಿವಿರ್‌ ತರಿಸಲು ಚೀಟಿ ಬರೆಯದಿರಿ’

‘ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮಿಡಿಸಿವಿರ್‌ ಔಷಧ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಈ ಔಷಧ ಬೇಕಿದ್ದರೆ ಅವಶ್ಯಕತೆಗೆ ಅನುಗುಣವಾಗಿ ಅವರು ಸರ್ಕಾರದ ಪೋರ್ಟಲ್‌ನಲ್ಲಿ ಬೇಡಿಕೆ ವಿವರವನ್ನು ನಿತ್ಯ ಅಪ್‌ಲೋಡ್‌ ಮಾಡಬೇಕು. ರೋಗಿಗಳ ಬಂಧುಗಳಿಗೆ ಔಷಧಿ ಚೀಟಿ ಬರೆದುಕೊಟ್ಟು ಅವರಿಂದ ಔಷಧ ತರಿಸುವುದು ಸರಿಯಾದ ವ್ಯವಸ್ಥೆ ಅಲ್ಲ. ಇದನ್ನು ಕೈಬಿಡಬೇಕು’ ಎಂದು ಗೌರವ ಗುಪ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.