ADVERTISEMENT

ಪಾದರಾಯನಪುರ ಮುಖ್ಯರಸ್ತೆ ಇನ್ನು 80 ಅಡಿ

ವಿಸ್ತರಣಾ ಕಾಮಗಾರಿಗೆ ಟೆಂಡರ್‌ * 230 ಕಟ್ಟಡಗಳಿಗೆ ಕುತ್ತು?

ಪ್ರವೀಣ ಕುಮಾರ್ ಪಿ.ವಿ.
Published 5 ಮಾರ್ಚ್ 2019, 19:46 IST
Last Updated 5 ಮಾರ್ಚ್ 2019, 19:46 IST
ಪಾದರಾಯನಪುರ ಮುಖ್ಯರಸ್ತೆ
ಪಾದರಾಯನಪುರ ಮುಖ್ಯರಸ್ತೆ   

ಬೆಂಗಳೂರು: ಬಿನ್ನಿಮಿಲ್‌ ಟ್ಯಾಂಕ್‌ ಬಂಡ್‌ ರಸ್ತೆಯಿಂದ ವಿಜಯನಗರ ಪೈಪ್‌ಲೈನ್‌ ರಸ್ತೆವರೆಗೆ ಪಾದರಾಯನಪುರ ಮುಖ್ಯರಸ್ತೆಯನ್ನು 80 ಅಡಿಗೆ ವಿಸ್ತರಿಸಲು ಬಿಬಿಎಂಪಿ ಮುಂದಾಗಿದ್ದು, ಈ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಿದೆ.

ಹೊಸಹಳ್ಳಿ, ಪಾದರಾಯನಪುರ, ಜಗಜೀವನರಾಮ್‌ನಗರ ಹಾಗೂ ರಾಯಪುರ ವಾರ್ಡ್‌ಗಳ ಮೂಲಕ ಹಾದು ಹೋಗಿರುವ ಈ ರಸ್ತೆಯಲ್ಲಿಪ್ರಸ್ತುತ ವಾಹನ ದಟ್ಟಣೆ 1.07 ಲಕ್ಷ ಪಿಸಿಯುಗಳಷ್ಟಿದೆ. 12 ವರ್ಷಗಳಲ್ಲಿ ಇದು 1.93 ಲಕ್ಷ ಪಿಸಿಯುಗಳಷ್ಟಾಗಬಹುದು ಎಂದು ಬಿಬಿಎಂಪಿ ಅಂದಾಜು ಮಾಡಿದೆ. ಸದಾ ವಾಹನ ದಟ್ಟಣೆ ಸಮಸ್ಯೆ ಎದುರಿಸುತ್ತಿರುವ ಈ ರಸ್ತೆಯ ವಿಸ್ತರಣಾ ಕಾಮಗಾರಿಯನ್ನು ಪಾಲಿಕೆ ನಗರೋತ್ಥಾನ ಯೋಜನೆ ಅಡಿ ಕೈಗೆತ್ತಿಕೊಂಡಿದೆ.

‘ಸದಾ ವಾಹನಗಳಿಂದ ಗಿಜಿಗುಡುವ ಈ ರಸ್ತೆಯಲ್ಲಿ ವಾಹನಗಳ ಸರಾಸರಿ ವೇಗಪ್ರತಿ ಗಂಟೆಗೆ 10 ಕಿ.ಮೀಗಳಷ್ಟೂ ಇಲ್ಲ. ವಿಸ್ತರಣೆ ಬಳಿಕ ತಲಾ 3.5 ಮೀಟರ್‌ ಅಗಲದ ನಾಲ್ಕು ಪಥಗಳ ರಸ್ತೆ ನಿರ್ಮಾಣಗೊಳ್ಳಲಿದ್ದು, ಬಳಿಕ ವಾಹನಗಳ ಸರಾಸರಿ ವೇಗ ಪ್ರತಿ ಗಂಟೆಗೆ 40 ಕಿ.ಮೀಗೆ ಹೆಚ್ಚಲಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ ನಂದೀಶ್‌ ಜೆ.ಆರ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಟೆಂಡರ್‌ಗೆ ಅರ್ಜಿ ಸಲ್ಲಿಸಲು ಇದೇ 28ರವರೆಗೆ ಕಾಲಾವಕಾಶ ನೀಡಲಾಗಿದೆ. ಬಳಿಕ ತಕ್ಷಣವೇ ಕೆಲಸ ಆರಂಭಿಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ಟೆಂಡರ್‌ಶ್ಯೂರ್‌ ಯೋಜನೆ ಅಡಿ ನಿರ್ಮಿಸುವ ರಸ್ತೆಗಳಲ್ಲಿ ಕಲ್ಪಿಸುವ ಎಲ್ಲ ಸೌಕರ್ಯಗಳನ್ನೂ ಈ ರಸ್ತೆಯಲ್ಲೂ ಒದಗಿಸಲಿದ್ದೇವೆ. ರಸ್ತೆಯ ಇಕ್ಕೆಲಗಳಲ್ಲಿ ತಲಾ 2 ಮೀ ಅಗಲದ ಪಾದಚಾರಿ ಮಾರ್ಗ, 1.5 ಮೀ ಅಗಲದ ಮಳೆನೀರು ಚರಂಡಿ ನಿರ್ಮಿಸಲಿದ್ದೇವೆ. ವಿದ್ಯುತ್‌, ಒಎಫ್‌ಸಿ ಮತ್ತಿತರ ಕೇಬಲ್‌ಗಳಿಗೆ ಪ್ರತ್ಯೇಕ ಕೊಳವೆ ಮಾರ್ಗ ನಿರ್ಮಿಸಲಿದ್ದೇವೆ’ ಎಂದು ನಂದೀಶ್‌ ತಿಳಿಸಿದರು.

ಪೊಲೀಸ್‌ ಠಾಣೆಯ ಕಟ್ಟಡ, ಒಂದು ಚರ್ಚ್‌, ಎರಡು ಮಸೀದಿ ಹಾಗೂ ಮೂರು ದೇವಸ್ಥಾನಗಳ ಕಟ್ಟಡಗಳನ್ನು ರಸ್ತೆ ವಿಸ್ತರಣೆಗೆ ಕೆಡವಬೇಕಾಗುತ್ತದೆ. 1 ರೈಲ್ವೆ ಮೇಲ್ಸೇತುವೆ, 1 ಸಣ್ಣ ಸೇತುವೆಗಳು ಹಾಗೂ 2 ಮೋರಿಗಳು ಈ ರಸ್ತೆಯಲ್ಲಿವೆ.

ಟಿಡಿಆರ್‌ ಬೇಡ; ನಗದು ಪರಿಹಾರ ಕೊಡಿ’

ಈ ರಸ್ತೆಗಾಗಿ 230 ಖಾಸಗಿ ಕಟ್ಟಡ ಮಾಲೀಕರು ಜಾಗ ಬಿಟ್ಟು ಕೊಡಬೇಕಾಗುತ್ತದೆ. ಇವುಗಳಲ್ಲಿ 205 ವಾಣಿಜ್ಯ ಮಳಿಗೆಗಳು ಹಾಗೂ 17 ವಸತಿ ಕಟ್ಟಡಗಳು ಸೇರಿವೆ.

ಕಟ್ಟಡ ಹಾಗೂ ಜಾಗವನ್ನು ಸ್ವಾಧೀನಪಡಿಸುಕೊಳ್ಳುವಾಗ ಪಾಲಿಕೆಯು ನಗದು ಪರಿಹಾರದ ಬದಲು ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್‌) ಪತ್ರ ನೀಡಲಿದೆ. ಈ ನಿರ್ಧಾರದ ಬಗ್ಗೆ ಅನೇಕ ಆಸ್ತಿ ಮಾಲೀಕರು ತಕರಾರು ತೆಗೆದಿದ್ದಾರೆ.

‘ಜೀವನೋಪಾಯಕ್ಕೆ ಇಲ್ಲಿ ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡಿದ್ದೇವೆ. ರಸ್ತೆ ವಿಸ್ತರಣೆ ಮಾಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ನಾವು ಬಿಟ್ಟುಕೊಡುವ ಜಾಗಕ್ಕೆ ಪ್ರತಿಯಾಗಿ ಟಿಡಿಆರ್‌ ಬದಲು ನಗದು ಪರಿಹಾರ ನೀಡಿದರೆ ಒಳ್ಳೆಯದು’ ಎನ್ನುತ್ತಾರೆ ಭೂಮಾಲೀಕರು.

ರಸ್ತೆ ವಿಸ್ತರಣೆಗೆ ಬಳಸಿಕೊಳ್ಳುವ ಜಾಗಕ್ಕೆ ₹ 140 ಕೋಟಿ ಹಾಗೂ ಒಡೆದು ಹಾಕುವ ಕಟ್ಟಡಗಳಿಗೆ ₹ 30 ಕೋಟಿ ಪರಿಹಾರ ನೀಡಬೇಕಾಗಿದೆ ಬರುತ್ತದೆ. ನಾಲ್ಕು ಅಂತಸ್ತಿನ 1 ಕಟ್ಟಡ, ಮೂರು ಅಂತಸ್ತಿನ 16 ಕಟ್ಟಡ, ಎರಡು ಅಂತಸ್ತಿನ 25 ಕಟ್ಟಡ, ಒಂದು ಅಂತಸ್ತಿನ 54 ಹಾಗೂ ನೆಲಮಹಡಿಯನ್ನು ಮಾತ್ರ ಹೊಂದಿರುವ 54 ಕಟ್ಟಡಗಳು ಹಾಗೂ 128 ಜೋಪಡಿಗಳನ್ನು ರಸ್ತೆ ವಿಸ್ತರಣೆಗಾಗಿ ಕೆಡವಬೇಕಾಗುತ್ತದೆ ಎಂದು ಪಾಲಿಕೆ ಅಂದಾಜು ಮಾಡಿದೆ.

‘ನಗದು ಪರಿಹಾರ ದುಬಾರಿ ನಿಜ. ಇಲ್ಲಿನ ನಿವಾಸಿಗಳ ಪೈಕಿ ಬಹುತೇಕರು ಬಡವರು. ಅವರಿಗೆ ಟಿಡಿಆರ್‌ ಬಗ್ಗೆ ಮಾಹಿತಿ ಇಲ್ಲ. ಅನೇಕರು ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳಲಿದ್ದಾರೆ. ನಗದು ಪರಿಹಾರ ನೀಡಿದರೆ ಅವರಿಗೆ ಪ್ರಯೋಜನ ಆಗಬಹುದು’ ಎಂದು ಪಾದರಾಯನಪುರ ವಾರ್ಡ್‌ನ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡಿ ಟಿಡಿಆರ್‌ ಬದಲು ನಗದು ಪರಿಹಾರ ಕೊಡಿಸುವಂತೆ ಒತ್ತಾಯಿಸುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.