ಬೆಂಗಳೂರು: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯ. ನಮ್ಮ ದೇಶದ ಕೋಮುವಾದಿ ಪಕ್ಷಗಳು ಹಾಗೂ ಸಂಘಟನೆಗಳು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಈ ದಾಳಿಯನ್ನು ಬಲವಾದ ಅಸ್ತ್ರವನ್ನಾಗಿ ಮಾಡಿಕೊಂಡಿವೆ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ–ಕಮ್ಯೂನಿಸ್ಟ್ (ಎಸ್‌ಯುಸಿಐ) ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಭಾಷ್ ದಾಸ್‌ಗುಪ್ತ ಬೇಸರ ವ್ಯಕ್ತಪಡಿಸಿದರು.
ಗಾಂಧಿ ಭವನದಲ್ಲಿ ಭಾನುವಾರ ನಡೆದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ 78ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ. ಕಾಶ್ಮೀರದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ದಾಳಿಯ ಹೊಣೆ ಹೊತ್ತಿರುವ ಸಂಘಟನೆ ಹೇಳಿರುವುದು ಕಾಶ್ಮೀರದ ಜನರ ಆಶಯಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು.
‘ಜಾಗತಿಕ ಮಟ್ಟದಲ್ಲಿ ಮಾನವ ಸಮಾಜವು, ಬಂಡವಾಳಶಾಹಿ ಪದ್ಧತಿಯಿಂದ ಆರ್ಥಿಕವಾಗಿ, ರಾಜಕೀಯವಾಗಿ ನಲುಗುತ್ತಿದೆ. ಹೀಗಾಗಿ ಇದಕ್ಕೆ ಪರ್ಯಾಯವಾಗಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಮಾಡಬೇಕಿದೆ. ಮಾರ್ಕ್ಸ್‌ವಾದದಲ್ಲಿ ಧರ್ಮಕ್ಕೆ ಸರಿಯಾದ ಸ್ಥಾನಮಾನ ನೀಡಿಲ್ಲ. ಆದ್ದರಿಂದ ನಮ್ಮ ಹೋರಾಟ ಕೋಮುವಾದದ ವಿರುದ್ಧ ನಡೆಯಲಿದೆ’ ಎಂದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಹಿರಂಗವಾಗಿ ಹಿಂದೂ ಕೋಮುವಾದವನ್ನು ಬಳಸಿಕೊಂಡರೆ, ಕಾಂಗ್ರೆಸ್ ಪಕ್ಷವು ಮೃದು ಕೋಮುವಾದದ ಧೋರಣೆ ಅನುಸರಿಸುತ್ತಿದೆ. ಎಲ್ಲಾ ಪಕ್ಷಗಳು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಜನರನ್ನು ಒಡೆದು ಆಳುತ್ತಿವೆ’ ಎಂದು ದೂರಿದರು.
ಎಸ್‌ಯುಸಿಐನ ರಾಜ್ಯ ಸಮಿತಿ ಸದಸ್ಯರಾದ ಅಪರ್ಣಾ, ಜ್ಞಾನಮೂರ್ತಿ ವಿ., ಎಂ.ಎನ್. ಶ್ರೀರಾಮ್, ವಿ.ಎನ್. ರಾಜಶೇಖರ್, ಬಿ. ರವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.