ಭದ್ರತಾ ಪಡೆ
(ಪಿಟಿಐ ಚಿತ್ರ)
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯ ಎಂದು ಕರ್ನಾಟಕ ಮುಸ್ಲಿಂ ಮುತ್ತಹದ್ ಮಹಜ್ ಬೆಂಗಳೂರು ನಗರ ಘಟಕ ತಿಳಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಜ್‌ನ ಮುಖಂಡರಾದ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಇಫ್ತಿಕಾರ್ ಅಹ್ಮದ್ ಖಾಸ್ಮಿ, ‘ಇದು ದೇಶದ ಕೋಮು ಸೌಹಾರ್ದ ಮತ್ತು ಶಾಂತಿಯನ್ನು ಕದಡುವ ಪ್ರಯತ್ನವಾಗಿದೆ. ಇಸ್ಲಾಂ ಧರ್ಮದ ಹೆಸರಿನಲ್ಲಿ ಇಂತಹ ದಾಳಿಗಳನ್ನು ಮಾಡುವ ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕುಟುಂಬದವರೊಂದಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಇಸ್ಲಾಂ ಧರ್ಮದಲ್ಲಿ ಅಮಾಯಕರನ್ನು ಕೊಲ್ಲುವುದು ನಿಷೇಧಿಸಲಾಗಿದೆ. ನಾವು ಜವಾಬ್ದಾರಿಯುತ ಭಾರತೀಯ ನಾಗರಿಕರಾಗಿ ಮತ್ತು ಶಾಂತಿ, ನ್ಯಾಯ ಹಾಗೂ ಮಾನವ ಜೀವನದ ಪಾವಿತ್ರ್ಯೆತೆಯನ್ನು ಎತ್ತಿಹಿಡಿಯುತ್ತೇವೆ’ ಎಂದು ಹೇಳಿದರು.
ಇದು ಮಾನವನ ಮೇಲೆ ನಡೆದ ದಾಳಿ ಮಾತ್ರವಲ್ಲ, ಭಾರತದ ಬಹುತ್ವ, ಶಾಂತಿ ಸಹಬಾಳ್ವೆಯ ಮೌಲ್ಯಗಳ ಮೇಲೆ ನಡೆಸಿದ ದಾಳಿಯಾಗಿದೆ. ಈ ಕರಾಳ ಶಕ್ತಿಗಳನ್ನು ಯಶಸ್ವಿಯಾಗಲು ಬಿಡಬಾರದು. ನಮ್ಮನ್ನು ವಿಭಜಿಸುವುದೇ ಅವರ ಗುರಿಯಾಗಿದೆ. ಆದ್ದರಿಂದ ನಾವು ಒಂದು ರಾಷ್ಟ್ರವಾಗಿ, ಒಗ್ಗಟ್ಟಿನಿಂದ ನಿಲ್ಲಬೇಕಿದೆ’ ಎಂದರು.
‘ದೇಶದ ಎಲ್ಲ ಸಮುದಾಯಗಳು ಶಾಂತಿಯಿಂದ, ಒಗ್ಗಟ್ಟಿನಿಂದ ಇರಬೇಕು. ಈ ದುರಂತದಿಂದಾಗಿ ಕೀಳುಮಟ್ಟದ ದ್ವೇಷದ ಬೀಜಗಳು ಚಿಗುರಲು ಅವಕಾಶ ನೀಡಬಾರದು. ಅಂತರ್‌ಧರ್ಮಿಯ ಸಂವಾದ, ಪರಸ್ಪರ ಗೌರವ ಹಾಗೂ ಕೋಮು ಸಾಮರಸ್ಯವನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.