ಬೆಂಗಳೂರು: ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕದಲ್ಲಿ ಅನಧಿಕೃತವಾಗಿ ವಾಸವಾಗಿರುವ ಪಾಕಿಸ್ತಾನದ ಪ್ರಜೆಗಳ ಪತ್ತೆ ಕಾರ್ಯ ಚುರುಕುಗೊಂಡಿದೆ.
ಅಧಿಕೃತ ಹಾಗೂ ಅನಧಿಕೃತವಾಗಿ ನೆಲಸಿರುವ ಪಾಕ್ ಪ್ರಜೆಗಳ ತಪಾಸಣೆಯನ್ನು ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸುತ್ತಿದ್ದಾರೆ. 88 ಮಂದಿ ದೀರ್ಘಾವಧಿ ವೀಸಾ (ಲಾಂಗ್ ಟರ್ಮ್ ವೀಸಾ) ಪಡೆದು ನೆಲಸಿದ್ದಾರೆ. ಉಳಿದವರು ಅಲ್ಪಾವಧಿ ವೀಸಾ ಪಡೆದು ನೆಲಸಿದ್ದರು. ಅನಧಿಕೃತ ವಾಸಿಗಳ ಗಡಿಪಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
‘ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆಹಚ್ಚಿ ಗಡುವಿನೊಳಗೆ ಹೊರಹಾಕಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಕಾರ್ಯಾಚರಣೆ ಆರಂಭವಾಗಿದೆ. ಗುಪ್ತಚರ ವಿಭಾಗದ ಅಧಿಕಾರಿಗಳು ಪಾಕಿಸ್ತಾನ ಪ್ರಜೆಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ದಾಖಲೆ ಪಡೆದು ಅವುಗಳ ನೈಜತೆಯ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ವಾಸ ಎಂಬುದು ಕಂಡುಬಂದರೆ ಅವರಿಗೆ ದೇಶ ತೊರೆಯುವಂತೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ’ ಎಂದು ಗೊತ್ತಾಗಿದೆ.
ಅನಧಿಕೃತ ವಾಸಿಗಳು ಎರಡು ದಿನಗಳ ಒಳಗಾಗಿ ಕರ್ನಾಟಕದಿಂದ ಹೊರಕ್ಕೆ ಹೋಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ದೀರ್ಘಾವಧಿ ವೀಸಾದ ಮೇಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಮಂದಿ ನೆಲಸಿದ್ದಾರೆ. ಕೆಲವು ಪಾಕ್ ಮಹಿಳೆಯರು ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಯುವಕರನ್ನು ವಿವಾಹವಾಗಿದ್ದಾರೆ. ಇವರನ್ನು ಗಡಿಪಾರು ಮಾಡುವ ಅಗತ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಶೈಕ್ಷಣಿಕ ವೀಸಾದ ಮೇಲೆ ಬಂದಿರುವ ಪಾಕ್ ವಿದ್ಯಾರ್ಥಿಯೊಬ್ಬ ದಾವಣಗೆರೆಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನಗರದ ಬಸವನಗುಡಿ, ಮೈಸೂರು, ಮಂಗಳೂರು ಸೇರಿ ರಾಜ್ಯದ ವಿವಿಧ ಕಡೆ ದೀರ್ಘಾವಧಿ ವೀಸಾದ ಮೇಲೆ 88 ಮಂದಿ ನೆಲಸಿದ್ದಾರೆ.
ವೈದ್ಯಕೀಯ ವೀಸಾದ ಅಡಿ ಬಂದಿರುವವರು ಏ.29ರವರೆಗೆ ಮಾತ್ರ ದೇಶದಲ್ಲಿರುವಂತೆ ಕೇಂದ್ರ ಸರ್ಕಾರ ಹೇಳಿದೆ. ನಂತರ ಅವರೂ ದೇಶ ತೊರೆಯಬೇಕು ಎಂದು ಮೂಲಗಳು ತಿಳಿಸಿವೆ.
‘ಬಾಂಗ್ಲಾ ಹಾಗೂ ಪಾಕಿಸ್ತಾನದ ಅಕ್ರಮ ವಲಸಿಗರ ಪತ್ತೆ ಕಾರ್ಯವನ್ನು ಕೇಂದ್ರ ಸರ್ಕಾರದ ಅಧಿಕಾರಿಗಳೇ ನಡೆಸುತ್ತಿದ್ದಾರೆ. ಪಾಕಿಸ್ತಾನದ ಎಷ್ಟು ಮಂದಿ ಅಕ್ರಮ ವಲಸಿಗರು ರಾಜ್ಯದಲ್ಲಿ ನೆಲಸಿದ್ದಾರೆ ಎಂಬ ಖಚಿತ ಮಾಹಿತಿ ಇಲ್ಲ’ ಎಂದು ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.