ADVERTISEMENT

ಪಾಕ್‌ ಯುವತಿ ಬಂಧನ: ಮನೆ ಮಾಲೀಕನೂ ಆರೋಪಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 20:12 IST
Last Updated 23 ಜನವರಿ 2023, 20:12 IST
   

ಬೆಂಗಳೂರು: ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ (19) ಅವರಿಗೆ ಆಶ್ರಯ ನೀಡಿ ದೇಶದ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ಮನೆ ಮಾಲೀಕನ ವಿರುದ್ಧವೂ ಬೆಳ್ಳಂದೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ಎಂಬುವರನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡಿದ್ದ ಇಕ್ರಾ, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪಾಕಿಸ್ತಾನದಿಂದ ಅಕ್ರಮವಾಗಿ ದೇಶದೊಳಗೆ ನುಸುಳಿದ್ದರು. ಅವರಿಬ್ಬರು ಕೆಲಸ ಅರಸಿ ಬೆಂಗಳೂರಿಗೆ ಬಂದು ಜುನ್ನಸಂದ್ರ ಅಯ್ಯಪ್ಪ
ಸ್ವಾಮಿ ದೇವಸ್ಥಾನ ಬಳಿಯ ಮನೆಯಲ್ಲಿ ಬಾಡಿಗೆಗೆ ಇದ್ದರು’ ಎಂದು ಪೊಲೀಸರು ಹೇಳಿದರು.

‘ಮನೆ ಮಾಲೀಕ ಗೋವಿಂದರೆಡ್ಡಿ, ಬಾಡಿಗೆದಾರರ ಹಿನ್ನೆಲೆ ಬಗ್ಗೆ ವಿಚಾರಣೆ ಮಾಡಿರಲಿಲ್ಲ. ಗುರುತಿನ ಚೀಟಿಗಳನ್ನೂ ಪರಿಶೀಲಿಸಿರಲಿಲ್ಲ. ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ಬಾಡಿಗೆದಾರರ ಬಗ್ಗೆ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡುವಂತೆ ಸ್ಥಳೀಯರಲ್ಲಿ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ಇಷ್ಟಾದರೂ ಗೋವಿಂದರೆಡ್ಡಿ, ಬಾಡಿಗೆದಾರರ ಬಗ್ಗೆ ಠಾಣೆಗೆ ಮಾಹಿತಿ ನೀಡಿರಲಿಲ್ಲ’ ಎಂದು ತಿಳಿಸಿದರು.

ADVERTISEMENT

‘ಗೋವಿಂದರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

‘ಯುವತಿ ಇಕ್ರಾ ಜೊತೆಗಿದ್ದ ಮುಲಾಯಂ ಸಿಂಗ್, ನಗರದ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದ. ಯುವತಿ ಪಾಕಿಸ್ತಾನದವರು ಎಂಬುದು ಗೊತ್ತಿದ್ದರೂ ಮೌನವಾಗಿದ್ದ. ಯುವತಿಯನ್ನು ಮದುವೆ ಸಹ ಆಗಿದ್ದ. ಮುಲಾಯಂ ಸಿಂಗ್‌ನನ್ನೂ ಈಗಾಗಲೇ ಬಂಧಿಸಲಾಗಿದೆ’ ಎಂದು ಹೇಳಿದರು.

ಹೈದರಾಬಾದ್ ನಿವಾಸಿಯೆಂದು ವಾದ: ‘ಇಕ್ರಾ ಅವರು ಹೈದರಾಬಾದ್ ನಿವಾಸಿಯೆಂಬುದಾಗಿ ವಾದಿಸುತ್ತಿದ್ದಾರೆ. ಆದರೆ, ಅದಕ್ಕೆ ಸಂಬಂಧಪಟ್ಟ ಯಾವುದೇ ಪುರಾವೆಗಳಿಲ್ಲ. ಸದ್ಯ ಅವರನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.