ADVERTISEMENT

ಅರಮನೆ ರಸ್ತೆ–ಟಿಡಿಆರ್ ನೀಡಲು ‘ಸುಪ್ರೀಂ’ ನಿರ್ದೇಶನ

ಅಧಿಕಾರಿಗಳಿಂದ ಅನಗತ್ಯ ವಿಳಂಬ– ರಾಜ್ಯ ಸರ್ಕಾರಕ್ಕೆ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 20:27 IST
Last Updated 10 ಡಿಸೆಂಬರ್ 2024, 20:27 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಜಯಮಹಲ್‌ ಹಾಗೂ ಬಳ್ಳಾರಿ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಾರಸುದಾರರಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಪ್ರಕಾರ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ನೀಡುವಂತೆ ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಹಾಗೂ ಅರವಿಂದ ಕುಮಾರ್ ಅವರಿದ್ದ ಪೀಠವು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಪ್ರಕರಣವನ್ನು ಇತ್ಯರ್ಥಪಡಿಸದೆ ಹಲವಾರು ‌ವರ್ಷಗಳ ಕಾಲ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ‘ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಅಡಿಯಲ್ಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಟಿಡಿಆರ್ ನೀಡಬೇಕು’ ಎಂದು ಪೀಠ ಸೂಚಿಸಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಪೀಠವು, ಟಿಡಿಆರ್ ನೀಡಲು ಆರು ವಾರಗಳ ಕಾಲಾವಕಾಶ ನೀಡಿದೆ. 

ಈ ಭೂಮಿಯನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ರಸ್ತೆ ವಿಸ್ತರಣೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗೂ ಅಂದಾಜು ಮೌಲ್ಯಗಳ ಮೇಲೆ ಟಿಡಿಆರ್ ನೀಡಲು ಪ್ರಯತ್ನಿಸಿದ್ದಾರೆ. ಇದು ಸ್ವೀಕಾರಾರ್ಹ ಅಲ್ಲ ಎಂದು ಪೀಠ ಹೇಳಿದೆ. 

ADVERTISEMENT

ಪ್ರತಿವಾದಿ ಅಧಿಕಾರಿಗಳ ಧೋರಣೆಯಿಂದ ಮುಜುಗರದ ಸನ್ನಿವೇಶ ಸೃಷ್ಟಿಯಾಗಿದ್ದು, ಈ ಪ್ರಕ್ರಿಯೆಗಳ ವೆಚ್ಚಕ್ಕಾಗಿ ಪ್ರತಿಯೊಬ್ಬ ಅರ್ಜಿದಾರರಿಗೆ ತಲಾ ₹1 ಲಕ್ಷ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಈ ಮೊತ್ತ ಪಾವತಿಗೆ ಹಣಕಾಸಿನ ತೊಂದರೆಗಳ ಬಗ್ಗೆ ರಾಜ್ಯದ ಅಧಿಕಾರಿಗಳು ಮನವಿ ಮಾಡಿದರು. 

ಆದಾಗ್ಯೂ ಪೀಠವು, ‘ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈಗ ತನ್ನ ಕ್ರಮಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಆಸ್ತಿಯ ಮೌಲ್ಯವನ್ನು ತನ್ನ ಇಚ್ಛೆ ಅಥವಾ ಕಲ್ಪನೆಗಳಿಗೆ ಅಥವಾ ಯಾವುದೇ ಕಾಲ್ಪನಿಕ ಮೌಲ್ಯದ ಮೇಲೆ ಟಿಡಿಆರ್ ನೀಡುವ ಉದ್ದೇಶಗಳಿಗಾಗಿ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿತು. 

ಪ್ರಕರಣವೇನು: ಈ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಬದಲಿಯಾಗಿ ಟಿಡಿಆರ್‌ ನೀಡುವ ಪ್ರಸ್ತಾವವನ್ನು ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಅರಮನೆಯ ಮಾಲೀಕತ್ವದ ಕುರಿತ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮೈಸೂರು ರಾಜವಂಶಸ್ಥರ ಮುಂದಿಟ್ಟಿದ್ದರು. ಎರಡೂ ಕಡೆಯವರು ಒಪ್ಪಿದ್ದರಿಂದ ರಸ್ತೆ ವಿಸ್ತರಣೆಗೆ ಬೇಕಾದ ಜಾಗವನ್ನು ಟಿಡಿಆರ್‌ ನೀಡಿ ಸ್ವಾಧೀನಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸರ್ಕಾರಗಳು ಈ ಹಿಂದಿನ ಆದೇಶಗಳನ್ನು ಮೂರು ಬಾರಿ ಮಾರ್ಪಾಡು ಮಾಡಿವೆ. ವಿವಾದಿತ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ ಹೆಚ್ಚುವರಿಯಾಗಿ 13.91 ಲಕ್ಷ ಚದರಡಿ ನಿರ್ಮಿಸಿದ ಪ್ರದೇಶ ಹಸ್ತಾಂತರಿಸುವ ಪ್ರಸ್ತಾಪವೂ ಒಳಗೊಂಡಿತ್ತು.

ಟಿಡಿಆರ್‌ನಿಂದಾಗಿ ಅನುಮತಿ ನೀಡಿದ ವ್ಯಾಪ್ತಿಯನ್ನು ಮೀರಿ ನಿರ್ಮಾಣ ಮಾಡುವುದಕ್ಕೆ ಡೆವಲಪರ್‌ಗಳಿಗೆ ಅವಕಾಶವಿರುತ್ತದೆ. ಸರ್ಕಾರ ಪರಿಹಾರವಾಗಿ ಹಣವನ್ನು ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಟಿಡಿಆರ್‌ ಅವಕಾಶವನ್ನು ನೀಡುತ್ತದೆ. ರಸ್ತೆ ವಿಸ್ತರಣೆಗಾಗಿ ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ಟಿಡಿಆರ್‌ ನೀಡಲು ಮಾರ್ಚ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.

2019ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಸ್ತೆ ವಿಸ್ತರಣೆಗಾಗಿ ಅರಮನೆ ಭೂಮಿ ವಶಕ್ಕೆ ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಂಡು, ಆದೇಶ ಹೊರಡಿಸಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರ ಸೆಪ್ಟೆಂಬರ್‌ ನಲ್ಲಿ ಆದೇಶವೊಂದನ್ನು ಹೊರಡಿಸಿ, ಎರಡೂ ಕಡೆಯ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಬಿಟ್ಟಿತ್ತು. ವಶಪಡಿಸಿಕೊಳ್ಳುವ ಭೂಮಿಗೆ ಪರಿಹಾರಾರ್ಥವಾಗಿ ದೊಡ್ಡ ಮೊತ್ತದ ಟಿಡಿಆರ್‌ ನೀಡಬೇಕಾಗುತ್ತದೆ ಎಂಬ ಕಾರಣವನ್ನು ನೀಡಿತ್ತು.

ಮರುಚಿಂತನೆಗೆ ಸೂಚಿಸಿದ್ದ ಆಯುಕ್ತ: 

ಆದರೆ, ಅಂದಿನ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಆದೇಶವನ್ನು ಜಾರಿ ಮಾಡದೆ, ಆದೇಶದ ಬಗ್ಗೆ ಮರುಚಿಂತನೆ ನಡೆಸುವುದು ಸೂಕ್ತ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅರಮನೆ ಮೈದಾನ ಪ್ರದೇಶ ಇನ್ನೂ ಕೃಷಿ ಭೂಮಿಯ ಸ್ಥಿತಿಯಲ್ಲೇ ಇದೆ. ಭೂಪರಿವರ್ತನೆಯೂ ಆಗಿಲ್ಲ. ಖಾತಾ ಕೂಡ ಆಗಿಲ್ಲ. ಭೂಮಿಯ ಮಾರ್ಗಸೂಚಿ ಮೌಲ್ಯದ ನಾಲ್ಕು ಪಟ್ಟನ್ನು ಮೌಲ್ಯವಾಗಿ ಪರಿಗಣಿಸಬೇಕಾಗುತ್ತದೆ. ಅಂದರೆ 13,91,742 ಚದರಡಿ ಅಥವಾ ₹1,396 ಕೋಟಿ ಮೌಲ್ಯದ್ದಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. 

472 ಎಕರೆ ವಿಸ್ತೀರ್ಣದ ಅರಮನೆ ಮೈದಾನವನ್ನೇ ವಶಕ್ಕೆ ತೆಗೆದುಕೊಳ್ಳುವುದು ಸೂಕ್ತ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮಂಜುನಾಥ್‌ ಪ್ರಸಾದ್‌ ಸಲಹೆ ನೀಡಿದ್ದರು. ಟಿಡಿಆರ್‌ ನೀಡಿ ಭೂ ಸ್ವಾಧೀನಪಡಿಸಿಕೊಳ್ಳುವ ಹಿಂದಿನ ನಿರ್ಣಯ ಕೈಬಿಟ್ಟು, ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮಧ್ಯಂತರ ಅರ್ಜಿ ಸಲ್ಲಿಸುವುದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.