
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾಬಂದಿ ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡಲಾಗಿದ್ದ ವಿಶೇಷ ಆತಿಥ್ಯಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರಕರಣದಲ್ಲಿ ಕೊಲೆ ಆರೋಪಿ ದರ್ಶನ್ ಅವರ ಆಪ್ತ ಧನ್ವೀರ್ ಅವರು ಸಾಕ್ಷ್ಯ ನಾಶಪಡಿಸಿರುವ ಅನುಮಾನ ವ್ಯಕ್ತವಾಗಿದೆ.
ಪ್ರಕರಣದ ತನಿಖೆಗಾಗಿ ಪೊಲೀಸರು ವಶಪಡಿಸಿಕೊಂಡಿದ್ದ ಧನ್ವೀರ್ ಅವರ ಮೊಬೈಲ್‍ನಲ್ಲಿ ಯಾವುದೇ ದತ್ತಾಂಶ ಸಿಕ್ಕಿಲ್ಲ. ದತ್ತಾಂಶವೇ ಇಲ್ಲದ ಹೊಸ ಮೊಬೈಲ್ ಕೊಟ್ಟು ತನಿಖೆಯ ದಿಕ್ಕು ತಪ್ಪಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮಾಂಸ, ಮದ್ಯ ಸೇವಿಸಿ ನೃತ್ಯ ಮಾಡಿದ್ದ ವಿಡಿಯೊ ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪ ಧನ್ವೀರ್ ಮೇಲಿತ್ತು. ಧನ್ವೀರ್ ಎರಡು ಬಾರಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.
ಜಪ್ತಿ ಮಾಡಿದ್ದ ಮೊಬೈಲ್ ಅನ್ನು ದತ್ತಾಂಶ ಸಂಗ್ರಹಣೆಗಾಗಿ ಸೈಬರ್ ಸೆಲ್‍ನ ಲ್ಯಾಬ್‍ಗೆ ಕಳುಹಿಸಿದ್ದರು. ಅದರಲ್ಲಿ ಯಾವುದೇ ದತ್ತಾಂಶ ಇಲ್ಲ ಎಂದು ವರದಿ ನೀಡಲಾಗಿದೆ.
‘ಧನ್ವೀರ್ ಅವರು ಮೊಬೈಲ್‍ನಲ್ಲಿ ದತ್ತಾಂಶವನ್ನು ಸಂಪೂರ್ಣವಾಗಿ ನಾಶಪಡಿಸಿದ್ದರೇ ಅಥವಾ ಬೇರೊಂದು ಮೊಬೈಲ್ ಕೊಟ್ಟು ತನಿಖೆಯ ದಿಕ್ಕು ತಪ್ಪಿಸಿದ್ದಾರೆಯೇ ಎಂಬ ಅನುಮಾನವಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
ದರ್ಶನ್‍ಗೆ ಟಿ.ವಿ ಭಾಗ್ಯ
ಕೊಲೆ ಆರೋಪಿ, ನಟ ದರ್ಶನ್ ಅವರಿಗೆ ಟಿ.ವಿ ಸೌಲಭ್ಯ ಕಲ್ಪಿಸಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಅವರಿರುವ ಬ್ಯಾರಕ್‌ನಲ್ಲಿ ಟಿ.ವಿ ಅಳವಡಿಸಲಾಗಿದೆ ಜತೆಗೆ, ಅದೇ ಬ್ಯಾರಕ್ ಎದುರು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.