ಬೆಂಗಳೂರು: ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆಗಳನ್ನು ತೆರೆಯಲು, ನಿರ್ವಹಿಸಲುತಮ್ಮ ಮಕ್ಕಳಿಗೆ ಅವಕಾಶ ನೀಡುವುದಿಲ್ಲ ಎಂದು ಹಲವು ಪೋಷಕರು ಶಾಲೆಗಳಿಗೆ ಲಿಖಿತ ಆಶ್ವಾಸನೆ ನೀಡಿದ್ದಾರೆ.
ಕೋವಿಡ್ ನಂತರದ ದಿನಗಳಲ್ಲಿ ಹೆಚ್ಚಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅವುಗಳಿಗೆ ಅಂಟಿಕೊಂಡಿದ್ದಾರೆ. ಈ ಸಮಸ್ಯೆಯಿಂದ ಮಕ್ಕಳನ್ನು ಹೊರತರಲು ಶಾಲೆಗಳು ಹೆಣಗಾಡುತ್ತಿವೆ. ವಿದ್ಯಾರ್ಥಿಗಳು ಶಿಕ್ಷಕರಿಗೇ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸುವುದು, ಗ್ರೂಪ್ ಚಾಟ್‌ಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳೂ ಪತ್ತೆಯಾಗಿವೆ. ಕೆಲ ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ‘ರೀಲ್ಸ್’ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಶಾಲಾ ಸಿಬ್ಬಂದಿಯ ಪ್ರಕಾರ, ಮಕ್ಕಳು ಇನ್‌ಸ್ಟಾ ಗ್ರಾಂ, ಫೇಸ್‌ಬುಕ್, ಸ್ನ್ಯಾಪ್‌ಚಾಟ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣ
ಗಳಲ್ಲಿ ಸಕ್ರಿಯರಾಗಿದ್ದಾರೆ.
‘ತಮ್ಮ ಮಕ್ಕಳಿಗೆ ಸೇರಿದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕು ಎಂದು ಸೂಚಿಸಿ ಪೋಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ಸಂವಹನದ ಉದ್ದೇಶಕ್ಕಾಗಿ ಮಕ್ಕಳಿಗೆ ಮೊಬೈಲ್‌ನ ಆವಶ್ಯಕತೆ ಇದ್ದಾಗಷ್ಟೇ ನೀಡಬೇಕು. ಸ್ಮಾರ್ಟ್‌ಫೋನ್ ಅಗತ್ಯವಿದ್ದಾಗ ಶಾಲೆಯ ಗಮನಕ್ಕೆ ತರಲು ಸೂಚಿಸಲಾಗಿದೆ’ ಎಂದು ಬನಶಂಕರಿ 3ನೇ ಹಂತದ ಲಿಟ್ಲ್ ಫ್ಲವರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಬಿ. ಗಾಯಿತ್ರಿದೇವಿ ಮಾಹಿತಿ ನೀಡಿದರು.
‘ಶಾಲೆಯ ಒಳಗೆ ಮೊಬೈಲ್ ಬಳಕೆಗೆ ಅನುಮತಿ ನೀಡಿಲ್ಲ. ಆದರೆ, ಮನೆಯಲ್ಲಿ, ಮಕ್ಕಳು ಬಳಸುತ್ತಿದ್ದಾರೆ. ಹೀಗಾಗಿ, ಪೋಷಕರು ಹೆಚ್ಚಿನ ಹೊಣೆಗಾರಿಕೆ ನಿಭಾಯಿಸಬೇಕು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ನೈಜ ವಯಸ್ಸು ಮರೆಮಾಚಿ ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿರುವ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಇದರಿಂದ ಅವರು ಅಪರಿಚಿತರ ಜೊತೆ ಸ್ನೇಹ ಬೆಳೆಸುವ ಅಪಾಯ ಇರುತ್ತದೆ’ ಎಂದು ಆಕ್ಸ್‌ಫರ್ಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಪ್ರಾಂಶುಪಾಲ ಬಿ.ಆರ್. ಸುಪ್ರೀತ್ ಹೇಳಿದರು.
ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮದ ನಡವಳಿಕೆ ಕಲಿಸಲು ಪ್ರತ್ಯೇಕ ಸಮಯವನ್ನು ನೀಡುತ್ತಿವೆ.ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಬಲವಾದ ಸೈಬರ್ ನೀತಿ ಪರಿಚಯಿಸಬೇಕು ಎನ್ನುವುದು ಶಾಲಾ ಆಡಳಿತ ಮಂಡಳಿಗಳ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.