ADVERTISEMENT

ಪಾರಿವಾಳ ಪತ್ರಿಕೆ ಸಂಪಾದಕ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 20:45 IST
Last Updated 26 ಆಗಸ್ಟ್ 2022, 20:45 IST

ಬೆಂಗಳೂರು: ಐಎಎಸ್‌ ಅಧಿಕಾರಿ ಹರೀಶ್‌ ಗೌಡ ಬಗ್ಗೆ ಅವಹೇಳನಕಾರಿ ವರದಿ ಪ್ರಕಟಿಸಿದ್ದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ‘ಪಾರಿವಾಳ’ ಪಾಕ್ಷಿಕ ಪತ್ರಿಕೆಯ ಸಂಪಾದಕ ಅತ್ತಿಗುಪ್ಪೆ ರವಿಕುಮಾರ್‌ ಅವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

‘ಪಿಯು ಪರೀಕ್ಷಾ ಮಂಡಳಿ ಅಧಿಕಾರಿಯಾಗಿದ್ದ ಹರೀಶ್‌ ಅವರ ಬಗ್ಗೆ ಪತ್ರಿಕೆಯಲ್ಲಿ 2000ರಲ್ಲಿ ವರದಿ ಪ್ರಕಟಿಸಲಾಗಿತ್ತು. ಅದನ್ನು ಪ್ರಶ್ನಿಸಿ ಹರೀಶ್‌ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. 2002ರಲ್ಲಿ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ, ರವಿಕುಮಾರ್‌ ಅವರಿಗೆ 1 ವರ್ಷ 2 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತೀರ್ಪು ಮರುಪರಿಶೀಲಿಸುವಂತೆ ಕೋರಿ ರವಿಕುಮಾರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸಿಎಂಎಂ ನ್ಯಾಯಾಲಯದಲ್ಲೇ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತ್ತು. ಮರು ವಿಚಾರಣೆ ನಡೆಸಿದ್ದ ನ್ಯಾಯಾಲಯ, 6 ತಿಂಗಳು ಶಿಕ್ಷೆ ವಿಧಿಸಿ 2017ರಲ್ಲಿ ಪುನಃ ಶಿಕ್ಷೆ ವಿಧಿಸಿತ್ತು’ ಎಂದು ತಿಳಿಸಿವೆ.

ADVERTISEMENT

‘ಇದನ್ನು ಪ್ರಶ್ನಿಸಿದ್ದ ದೂರುದಾರ ಹರೀಶ್, ಶಿಕ್ಷೆ ಪ್ರಮಾಣ ಹೆಚ್ಚಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಮುಗಿದಿದ್ದು, 6 ತಿಂಗಳ ಶಿಕ್ಷೆಯನ್ನೇ ನ್ಯಾಯಾಲಯ ಕಾಯಂಗೊಳಿಸಿದೆ. ಇದೇ ಕಾರಣಕ್ಕೆ ರವಿಕುಮಾರ್ ಅವರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, ಶಿಕ್ಷೆ ಅನುಭವಿಸಲೆಂದು ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ' ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.