ಬೆಂಗಳೂರು: ಇಲ್ಲಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಮುಕ್ತಾಯವಾಗಿ ಮೂರು ವರ್ಷ ಕಳೆದರೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಇದರಿಂದ ಎಪಿಎಂಸಿ ಆವರಣದಲ್ಲಿ ವಾಹನ ನಿಲುಗಡೆಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಮಧ್ಯವರ್ತಿಗಳು, ವರ್ತಕರು, ಕಾರ್ಮಿಕರು, ಮಳಿಗೆ ಮಾಲೀಕರು ಹಾಗೂ ರೈತರು ತಮ್ಮ ವಾಹನಗಳನ್ನು ಎಪಿಎಂಸಿ ಆವರಣದ ರಸ್ತೆಯ ಬದಿಯಲ್ಲೇ ನಿಲುಗಡೆ ಮಾಡುತ್ತಿದ್ದಾರೆ.
‘ಈರುಳ್ಳಿ, ಬೆಳ್ಳುಳ್ಳಿ, ತೆಂಗಿನಕಾಯಿ ಹೊತ್ತು ತರುವ ಬೃಹತ್ ಲಾರಿಗಳು ಮಳಿಗೆಗಳ ಎದುರು ನಿಂತಿರುತ್ತವೆ. ಭಾರಿ ವಾಹನಗಳ ಮಧ್ಯೆ ಸಿಗುವ ಅಲ್ಪ ಜಾಗದಲ್ಲಿ ಲಘು ವಾಹನಗಳನ್ನು ನಿಲುಗಡೆ ಮಾಡುವ ಪರಿಸ್ಥಿತಿಯಿದೆ. ಒಂದು ವೇಳೆ ವಾಹನವನ್ನು ಬೆಳಿಗ್ಗೆಯೇ ಕೊಂಡೊಯ್ದು ನಿಲುಗಡೆ ಮಾಡಿದ್ದರೆ ವಾಪಸ್ ತೆಗೆದುಕೊಂಡು ಬರುವುದಕ್ಕೆ ಹರಸಾಹಸ ಮಾಡಬೇಕಿದೆ. ಕಟ್ಟಡವಿದ್ದರೂ ನಮಗೆ ಸಂಕಟ ತಪ್ಪುತ್ತಿಲ್ಲ’ ಎಂದು ತೆಂಗಿನಕಾಯಿ ವರ್ತಕ ಅಬ್ದುಲ್ ಲತೀಫ್ ನೋವು ತೋಡಿಕೊಂಡರು.
ಬುಧವಾರ ಮಾರುಕಟ್ಟೆಯಲ್ಲಿ ಸುತ್ತಾಟ ನಡೆಸಿದಾಗ ವಾಹನ ನಿಲುಗಡೆಗೆ ಕಾರು ಚಾಲಕರು ಹಾಗೂ ದ್ವಿಚಕ್ರ ವಾಹನಗಳ ಸವಾರರು ಪರದಾಡುತ್ತಿರುವ ದೃಶ್ಯ ಕಾಣಿಸಿತು. ಬಹುಮಹಡಿ ಕಟ್ಟಡದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದರೆ ಸರಾಗವಾಗಿ ವಾಹನವನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿತ್ತು ಎಂದು ಹಲವು ವರ್ತಕರು ಹೇಳಿದರು.
ಕೋಟ್ಯಂತರ ರೂಪಾಯಿ ವ್ಯರ್ಥ:
ಎಪಿಎಂಸಿ ಆವರಣದಲ್ಲಿ ದಟ್ಟಣೆ ನಿಯಂತ್ರಿಸಲು ಎಪಿಎಂಸಿ ನಿಧಿಯಿಂದ ₹80 ಕೋಟಿ ವೆಚ್ಚದಲ್ಲಿ ಸಕಲ ಸೌಲಭ್ಯಗಳು ಇರುವ 10 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಅಧಿಕಾರಿಗಳು ಬಳಸುವ ಮೂರು ವಾಹನಗಳನ್ನು ಕೆಳ ಅಂತಸ್ತಿನಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವುದನ್ನು ಬಿಟ್ಟರೆ, ಸಾರ್ವಜನಿಕರ ಯಾವುದೇ ವಾಹನಗಳು ಅಲ್ಲಿ ನಿಲುಗಡೆ ಆಗುತ್ತಿಲ್ಲ. ಮುಖ್ಯ ದ್ವಾರದ ಗೇಟ್‌ಗಳು ಮೂರು ವರ್ಷದಿಂದಲೂ ಬೀಗ ಹಾಕಿದ ಸ್ಥಿತಿಯಲ್ಲೇ ಇವೆ.
2018ರಲ್ಲಿ ಕಟ್ಟಡದ ಕಾಮಗಾರಿ ಆರಂಭವಾಗಿತ್ತು. ಎರಡು ವರ್ಷ ಕಾಮಗಾರಿ ಚುರುಕಾಗಿ ಸಾಗಿತ್ತು. ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕೆಲಸ ಸ್ಥಗಿತಗೊಂಡಿತ್ತು. ನಂತರ ಬೇರೆ ಬೇರೆ ಕಾರಣಕ್ಕೆ ಕುಂಟುತ್ತಲೇ ಸಾಗಿದ್ದ ಕಾಮಗಾರಿ 2022ರ ಮೇ ವೇಳೆಗೆ ಮುಕ್ತಾಯವಾಗಿತ್ತು.
ಹೆದ್ದಾರಿಯಲ್ಲಿ ನಿತ್ಯವೂ ಸಮಸ್ಯೆ: ಯಶವಂತಪುರ ರೈಲು ನಿಲ್ದಾಣ, ಗೊರಗುಂಟೆಪಾಳ್ಯ, ಸ್ಯಾಂಡಲ್ ಸೋಫ್ ಫ್ಯಾಕ್ಟರಿ, ಓರಾಯನ್ ಮಾಲ್ ಸುತ್ತಮುತ್ತ ವಾಹನ ನಿಲುಗಡೆಗೆ ನಿತ್ಯವೂ ಚಾಲಕರು ಪರದಾಡುತ್ತಲೇ ಇದ್ದಾರೆ. ಈ ಕಟ್ಟಡವನ್ನು ಆದಷ್ಟು ಬೇಗನೇ ಬಳಕೆಗೆ ಮುಕ್ತಗೊಳಿಸಬೇಕು. ಜತೆಗೆ, ತುಮಕೂರು ಹೆದ್ದಾರಿಯ ಅಲ್ಲಲ್ಲಿ ಬಹುಮಹಡಿ ಕಟ್ಟಡದ ಮಾಹಿತಿಯ ಫಲಕವನ್ನು ಅಳವಡಿಸಬೇಕು ಎಂದು ವಾಹನ ಸವಾರ ಮಧುಸೂದನ್ ಆಗ್ರಹಿಸಿದ್ದಾರೆ.
ಮೂರನೇ ಬಾರಿಯೂ ಹಿಂದೇಟು
ಬಹುಮಹಡಿ ಕಟ್ಟಡದಲ್ಲಿನ ಪಾರ್ಕಿಂಗ್ ನಿರ್ವಹಣೆ ಗುತ್ತಿಗೆಗಾಗಿ ನಾಲ್ಕು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಿ ಬಿಡ್ ಆಹ್ವಾನಿಸಿದರೂ ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷ ₹12.70 ಕೋಟಿ ಹಾಗೂ ₹7 ಕೋಟಿ ಮೊತ್ತ ನಿಗದಿಗೊಳಿಸಿ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಅಲ್ಲದೇ ಪ್ರತಿವರ್ಷ ಶೇ 10ರಷ್ಟು ಏರಿಕೆ ಮಾಡುವುದಾಗಿ ಷರತ್ತು ವಿಧಿಸಲಾಗಿತ್ತು. ಆಗಲೂ ಯಾವುದೇ ಗುತ್ತಿಗೆದಾರರು ಟೆಂಡರ್‌ನಲ್ಲಿ ಪಾಲ್ಗೊಂಡಿರಲಿಲ್ಲ.
‘ಕಳೆದ ಏಪ್ರಿಲ್ 22ರಂದು ಮತ್ತೆ ಟೆಂಡರ್ ಆಹ್ವಾನಿಸಲಾಗಿತ್ತು. ಏಪ್ರಿಲ್ 29ರ ಸಂಜೆ 4ರವರೆಗೆ ಅವಕಾಶ ಇತ್ತು. ಈಗಿನ ಟೆಂಡರ್‌ನಲ್ಲಿ ₹2.20 ಕೋಟಿ ಮೊತ್ತ ನಿಗದಿ ಮಾಡಿದ್ದರಿಂದ ಈಗಲೂ ಯಾವುದೇ ಗುತ್ತಿಗೆ ಸಂಸ್ಥೆ ಆಸಕ್ತಿ ತೋರಿಲ್ಲ’ ಎಂದು ಮೂಲಗಳು ತಿಳಿಸಿವೆ. ‘ಅಧಿಕಾರಿಗಳು ವಾಸ್ತವ ಪರಿಸ್ಥಿತಿ ಗಮನಿಸದೇ ಟೆಂಡರ್ ಕರೆಯುತ್ತಿದ್ದಾರೆ. ಇದೇ ಕಾರಣಕ್ಕೆ ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿದ್ದರೂ ಯಾರೂ ಕಟ್ಟಡವನ್ನು ಗುತ್ತಿಗೆ ಪಡೆದುಕೊಳ್ಳಲು ಮುಂದಾಗಿಲ್ಲ. ದುಬಾರಿ ಮೊತ್ತ ನೀಡಿ ಕಟ್ಟಡವನ್ನು ಗುತ್ತಿಗೆ ಪಡೆದುಕೊಂಡರೆ ನಷ್ಟವೇ ಅಧಿಕ’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.
ಈಡೇರದ ಭರವಸೆ
ಶೀಘ್ರದಲ್ಲೇ ಕಟ್ಟಡವನ್ನು ವಾಹನ ಚಾಲಕರ ಬಳಕೆಗೆ ನೀಡಲಾಗುವುದು ಎಂದು 2024ರ ಮೇನಲ್ಲಿ ಎಪಿಎಂಸಿ ಅಧಿಕಾರಿಗಳು ಭರವಸೆ ನೀಡಿದ್ದರು. ಭರವಸೆ ನೀಡಿ ವರ್ಷವಾದರೂ ಕಟ್ಟಡ ಬಳಕೆಗೆ ಲಭ್ಯವಾಗುತ್ತಿಲ್ಲ.
‘2024ರ ಜನವರಿ 11ರಂದು ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಆ ಟೆಂಡರ್‌ನಲ್ಲಿ ಯಾವುದೇ ಸಂಸ್ಥೆ ಹಾಗೂ ಏಜೆನ್ಸಿಯವರು ಭಾಗವಹಿಸಿರಲಿಲ್ಲ. ಅದಾದ ಮೇಲೆ ಮಾರ್ಚ್ 1ರಂದು ಸಮಿತಿ ಸಭೆ ನಡೆಸಿ ತಿಂಗಳ ಟೆಂಡರ್ ಮೊತ್ತ ನಿಗದಿ ಪಡಿಸಿಕೊಂಡು ಅಥವಾ ಪಾರ್ಕಿಂಗ್ ಸೇವೆಯಿಂದ ಬರುವ ಮೊತ್ತದಲ್ಲಿ ಶೇಕಡವಾರು ಆದಾಯ ಹಂಚಿಕೆ ಆಧಾರದಲ್ಲಿ ಟೆಂಡರ್ ಆಹ್ವಾನಿಸುವ ಕುರಿತು ಕ್ರಮ ತೆಗೆದುಕೊಳ್ಳಲಾಗಿತ್ತು. ಅಷ್ಟರಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಆದ್ದರಿಂದ ಬಳಕೆಗೆ ನೀಡಲು ಸಾಧ್ಯವಾಗಿರಲಿಲ್ಲ. ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಎಂಪಿಎಂಸಿ ಅಧಿಕಾರಿಗಳು ತಿಳಿಸಿದ್ದರು. ಒಂದು ವರ್ಷವಾಗಿದ್ದರೂ ಕ್ರಮ ಆಗಿಲ್ಲ. ₹ 80 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಕಟ್ಟಡ ವ್ಯರ್ಥವಾಗುತ್ತಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.