ಬೆಂಗಳೂರು: ಮಳೆನೀರನ್ನು ಹಿಡಿದಿಟ್ಟುಕೊಂಡು, ಅಂತರ್ಜಲ ವೃದ್ಧಿಯತ್ತ ಹೆಚ್ಚು ಗಮನ ಕೇಂದ್ರೀಕರಿಸಿರುವ ಬಿಬಿಎಂಪಿ, ಉದ್ಯಾನಗಳಲ್ಲಿ ಮಳೆ ನೀರು ಇಂಗಿಸುವ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುತ್ತಿದೆ. ಉದ್ಯಾನಗಳಲ್ಲಿ ನೀರು ಇಂಗಿಸುವ ಸಾಮರ್ಥ್ಯವು 26 ಕೋಟಿ ಲೀಟರ್‌ಗಳಷ್ಟಿದ್ದು, ಈ ವರ್ಷಾಂತ್ಯಕ್ಕೆ 54 ಕೋಟಿ ಲೀಟರ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ.
ಇಂಗುಗುಂಡಿಗಳ ಮೂಲಕ ಮಳೆ ನೀರನ್ನು ಹಿಡಿದಿಡುವ ಯೋಜನೆಯನ್ನು ಬಿಬಿಎಂಪಿ 2020ರಲ್ಲಿಯೇ ಆರಂಭಿಸಿತ್ತು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಮೂಲಕ ‘ಯುನೈಟೆಡ್ ವೇ ಬೆಂಗಳೂರು’ ಈ ಯೋಜನೆಯನ್ನು ಪಾಲಿಕೆಯ ಉದ್ಯಾನಗಳಲ್ಲಿ ಅನುಷ್ಠಾನಗೊಳಿಸಿದೆ.
ಉದ್ಯಾನಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿರುವುದರಿಂದ ಉದ್ಯಾನಕ್ಕೆ ಮಾತ್ರವಲ್ಲದೆ ಸುತ್ತಮತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲೂ ಅಂತರ್ಜಲ ವೃದ್ಧಿಯಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ವೃದ್ಧಿಯಾಗುತ್ತಿದೆ. ಇಂಗುಗುಂಡಿಗಳು ನಿರ್ಮಾಣವಾದ ಮೂರು ವರ್ಷಗಳಲ್ಲಿ ಅದರ ಸಂಪೂರ್ಣ ಅನುಕೂಲ ಎಲ್ಲರಿಗೂ ಗೋಚರವಾಗುತ್ತದೆ.
ಬೆಂಗಳೂರಿನಲ್ಲಿ ವರ್ಷಕ್ಕೆ ಸರಾಸರಿ 970 ಮಿಲಿ ಮೀಟರ್ ಮಳೆಯಾಗುತ್ತದೆ. 59 ದಿನಗಳನ್ನು ಮಳೆದಿನ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಪ್ರತಿಯೊಂದು ಇಂಗುಗುಂಡಿ ಕನಿಷ್ಠ 30 ದಿನ ಸಂಪೂರ್ಣ ತುಂಬುತ್ತದೆ. ಹೆಚ್ಚು ಇಂಗುಗುಂಡಿಗಳನ್ನು ನಿರ್ಮಿಸಿ ಹೆಚ್ಚು ಮಳೆ ನೀರನ್ನು ಹಿಡಿದಿಟ್ಟುಕೊಂಡು, ಇಂಗಿಸುವ ಉದ್ದೇಶ ಬಿಬಿಎಂಪಿಯ ತೋಟಗಾರಿಕೆ ವಿಭಾಗದ್ದಾಗಿದೆ.
ಬಿಬಿಎಂಪಿ ಉದ್ಯಾನಗಳಲ್ಲಿ ಮಳೆ ನೀರನ್ನು ಇಂಗಿಸಲು ಗುಂಡಿಗಳನ್ನು ನಿರ್ಮಿಸುವ ಕಾರ್ಯವನ್ನು 2020ರಿಂದಲೇ ಆರಂಭಿಸಿದೆ. ಪ್ರಾರಂಭದಲ್ಲಿ ನಿರ್ಮಿಸಲಾದ ಗುಂಡಿಗಳ ಸಂಖ್ಯೆಯ ಕೆಲವು ನೂರು ಮಾತ್ರ ಇತ್ತು. ಆಗ ನಿರ್ಮಾಣವಾಗಿರುವ ಇಂಗುಗುಂಡಿಗಳು ಇದೀಗ ಹೆಚ್ಚಿನ ಪ್ರಯೋಜನವನ್ನು ಸುತ್ತಮುತ್ತಲಿನ ಪ್ರದೇಶಕ್ಕೆ ನೀಡುತ್ತಿವೆ. ಇಂಗುಗುಂಡಿಗಳನ್ನು ನಿರ್ಮಿಸುವ ಯೋಜನೆಗೆ 2024ರಿಂದ ವೇಗ ನೀಡಲಾಗಿದೆ.
‘ಎಚ್‌ಬಿಆರ್ ಲೇಔಟ್‌ನಲ್ಲಿರುವ ‘ಫಾರೆಸ್ಟ್ ಪಾರ್ಕ್’ನಲ್ಲಿ ಮೂರು ವರ್ಷಗಳ ಹಿಂದೆ ಇಂಗುಗುಂಡಿಗಳನ್ನು ನಿರ್ಮಿಸಲಾಯಿತು. ಆ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಉದ್ಯಾನದಲ್ಲಿ ಗುಂಡಿ ತೋಡಿ, ಹಾಳು ಮಾಡಲಾಗುತ್ತಿದೆ ಎಂದು ಆಂತಕ ವ್ಯಕ್ತಪಡಿಸಿದ್ದರು. ಆದರೆ, ಇಂದು ಅವರೆಲ್ಲ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಉದ್ಯಾನದಲ್ಲಿರುವ ಕೊಳವೆಬಾವಿಯಲ್ಲಿ ಎಂದಿಗೂ ನೀರಿರುತ್ತದೆ. ಅಷ್ಟೇ ಅಲ್ಲ, ಸುತ್ತಮುತ್ತಲಿನ ನಾಲ್ಕೂ ದಿಕ್ಕುಗಳಲ್ಲಿರುವ ನಿವಾಸಿಗಳ ಕೊಳವೆಬಾವಿಗಳಲ್ಲೂ ನೀರು ಮೇಲ್ಮಟ್ಟದಲ್ಲೇ ಇರುತ್ತದೆ. ಅವರೆಲ್ಲರೂ ಬಂದು ಅಭಿನಂದನೆ ಸಲ್ಲಿಸುವಾಗ ನಮ್ಮ ಶ್ರಮ ಸಾರ್ಥಕ ಎನಿಸುತ್ತದೆ’ ಎಂದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,280 ಉದ್ಯಾನಗಳಿವೆ. ಎಲ್ಲ ಉದ್ಯಾನಗಳಲ್ಲೂ ಇಂಗುಗುಂಡಿಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಕನಿಷ್ಠ ಅರ್ಧ ಎಕರೆಯಷ್ಟು ವಿಸ್ತಾರವಿರುವ ಉದ್ಯಾನದಲ್ಲಿ, ಮಳೆ ನೀರು ಹರಿಯುವ ಪ್ರದೇಶ, ಅಚ್ಚುಕಟ್ಟು ಪ್ರದೇಶವನ್ನು ಪರಿಶೀಲಿಸಿಕೊಂಡು ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ ಸುಮಾರು 450 ಉದ್ಯಾನಗಳು ವರ್ಷಾಂತ್ಯಕ್ಕೆ ಇಂಗು ಗುಂಡಿಗಳನ್ನು ಹೊಂದಲಿವೆ. ಮಳೆ ನೀರನ್ನು ಸಾಧ್ಯವಾದಷ್ಟೂ ಹೆಚ್ಚಾಗಿ ಹಿಡಿದಿಟ್ಟುಕೊಳ್ಳುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ ಎಂದು ಮಾಹಿತಿ ನೀಡಿದರು.
2025ರ ಡಿಸೆಂಬರ್‌ವರೆಗೆ ನಿರ್ಮಿಸುವ ಗುರಿ 370; ದಕ್ಷಿಣ ವಲಯ 500; ಆರ್.ಆರ್. ನಗರ ವಲಯ 320; ಪಶ್ಚಿಮ ವಲಯ 153; ಯಲಹಂಕ ವಲಯ 309; ಪೂರ್ವ ವಲಯ ಇಂಗುಗುಂಡಿ ಮಾಹಿತಿ 4 ಅಡಿ; ಇಂಗು ಗುಂಡಿಯ ಸುತ್ತಳತೆ 12 ಅಡಿ; ಇಂಗು ಗುಂಡಿಯ ಆಳ 4270 ಲೀಟರ್; ಒಂದು ಇಂಗು ಗುಂಡಿಗೆ ಒಂದು ಬಾರಿ ಮಳೆನೀರು ಹಿಡಿದಿರುವ ಸಾಮರ್ಥ್ಯ 1.28 ಲಕ್ಷ ಲೀಟರ್; ವರ್ಷಕ್ಕೆ ಕನಿಷ್ಠ 30 ಬಾರಿ ಇಂಗು ಗುಂಡಿಯೊಂದು ಮಳೆನೀರನ್ನು ಹೀರಿಕೊಳ್ಳುತ್ತದೆ ₹37 ಸಾವಿರ; ಒಂದು ಇಂಗು ಗುಂಡಿ ನಿರ್ಮಾಣದ ವೆಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.