ADVERTISEMENT

ಬೆಂಗಳೂರು: ಮೆಟ್ರೊ ಹಳಿ ದಾಟಲು ಯತ್ನಿಸಿದ ಇಬ್ಬರು ಪ್ರಯಾಣಿಕರು!

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 21:28 IST
Last Updated 11 ಫೆಬ್ರುವರಿ 2023, 21:28 IST
   

ಬೆಂಗಳೂರು: ವಿದ್ಯುತ್ ಸಂಪರ್ಕ ಇರುವುದನ್ನು ಅರಿಯದೆ ಮೆಟ್ರೊ ರೈಲು ಹಳಿಗಳನ್ನು ದಾಟಲು ಶನಿವಾರ ಪ್ರಯತ್ನಿಸಿದ ಇಬ್ಬರನ್ನು ಸಾರ್ವಜನಿಕರು ಮತ್ತು ಭದ್ರತಾ ಸಿಬ್ಬಂದಿ ರಕ್ಷಿಸಿದರು.

ನಾಗಸಂದ್ರ ಕಡೆಗೆ ಹೋಗಬೇಕಿದ್ದ ಪ್ರಯಾಣಿಕರಿಬ್ಬರು ಕುವೆಂಪು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಮೆಜೆಸ್ಟಿಕ್ ಕಡೆಗೆ ಹೋಗುವ ಪ್ಲಾಟ್‌ಫಾರಂಗೆ ಹೋಗಿದ್ದರು. ಎದುರಿನ ಪ್ಲಾಟ್‌ಫಾರಂಗೆ ಹೋಗಬೇಕಿತ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದರು. ತರಕಾರಿ ಬ್ಯಾಗ್ ಹಿಡಿದಿದ್ದ ಇಬ್ಬರು ಅತ್ತ ಸಾಗಲು ಹಳಿಗಳ ಮೇಲೆ ಇಳಿದರು.

ಸ್ಥಳದಲ್ಲಿ ಇದ್ದ ಸಹ ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿ ಕೂಗಿ ಅವರನ್ನು ಮುಂದೆ ಹೋಗದಂತೆ ಎಚ್ಚರಿಸಿ ವಾಪಸ್ ಕರೆದರು. ಬಳಿಕ ಅವರನ್ನು ಮೇಲಕ್ಕೆ ಹತ್ತಿಸಿದರು.

ADVERTISEMENT

ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ನಿಯಂತ್ರಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮೊದಲ ಬಾರಿಗೆ ಮೆಟ್ರೊ ರೈಲು ಪ್ರಯಾಣ ಮಾಡುತ್ತಿದ್ದ ಇಬ್ಬರೂ, ಸಾಮಾನ್ಯ ರೈಲುಗಳ ಹಳಿ ದಾಟುವ ಮಾದರಿಯಲ್ಲೇ ಇಲ್ಲಿಯೂ
ಪ್ರಯತ್ನಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

‘ರೈಲುಗಳ ಸಂಚಾರವನ್ನು 10 ನಿಮಿಷ ತಡೆಯಲಾಗಿತ್ತು. ಬಳಿಕ ಅವರನ್ನು ಎದುರಿನ ಪ್ಲಾಟ್‌ಫಾರಂಗೆ ಕಳುಹಿಸಿದರು. ಜೋಡಿ ಮಾರ್ಗದ ಮಧ್ಯದಲ್ಲಿ 700 ಕೆ.ವಿ. ವಿದ್ಯುತ್ ಸಂಪರ್ಕದ ಎರಡು ಹಳಿಗಳಿದ್ದು, ಅಲ್ಲಿಯವರೆಗೆ ಅವರು ಹೋಗಿದ್ದರೆ ಅವಘಡ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ತಿಳಿವಳಿಕೆ ಇಲ್ಲದೆ ಹಳಿಗಳ ಮೇಲೆ ಇಳಿದಿದ್ದರಿಂದ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು
ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.