ADVERTISEMENT

ಜಿ.ಪಂ. ಸದಸ್ಯ ವಿರುದ್ಧ ಪಿಡಿಒ ದೂರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 18:50 IST
Last Updated 22 ಜನವರಿ 2019, 18:50 IST

ಬೆಂಗಳೂರು: ಸರ್ಕಾರಿ ಸೇವೆಗೆ ತಡೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜು ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಲತಾದೇವಿ ವಿರುದ್ಧ ಮಂಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪಿ.ಎ.ಪೂಣಚ್ಚ ಅವರು ವಸಂತನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

‘ನನ್ನನ್ನು ಜನವರಿ 1ರಂದು ಬಂಡಿಕೊಡಿಗೆ ಗ್ರಾಮ ಪಂಚಾಯಿತಿಗೆ ವರ್ಗ ಮಾಡಲಾಗಿತ್ತು. ಇದರ ವಿರುದ್ಧ ಕೆಎಟಿಯಲ್ಲಿ ತಡೆಯಾಜ್ಞೆ ತಂದು ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೆ. 14ನೇ ಹಣಕಾಸಿನ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲು ನಾನು ಜನವರಿ 7ರಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ಹೋಗಿದ್ದೆ. ಆ ದಿನ ಸಂಜೆ ಕೆಂಪರಾಜು ಹಾಗೂ ಲತಾದೇವಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದು ಬರೆದುಕೊಡಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಲತಾದೇವಿ ಅವರು ಶ್ರೀರಾಮ್‌ ಪ್ರಾಪರ್ಟಿಸ್‌ಗೆ 1 ಎಕರೆ 12 ಗುಂಟೆ ಮಾರಿದ್ದರು. ಅದನ್ನು ಕಡಿಮೆ ಬೆಲೆಗೆ ಮಾರಿದ್ದು, ಬೆಲೆ ಹೆಚ್ಚಾಗಿರುವ ಕಾರಣ ಅಧಿಕ ಬೆಲೆ ಕೊಡಿಸಬೇಕು ಎಂದು ಒತ್ತಡ ಹೇರಿದ್ದರು. ಕಾನೂನು ಪ್ರಕಾರ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ಈ ಕಾರಣಕ್ಕೆ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಜತೆಗೆ, ಈ ಹಿಂದೆ ಮೂರು ಸಲ ಅಮಾನತು ಆಗಿರುವ ವೆಂಕಟರಂಗನ್‌ ಎಂಬುವರನ್ನು ಪಿಡಿಒ ಮಾಡಲು ನನಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.