ADVERTISEMENT

ಪಡಿತರ ಅಕ್ಕಿ ಕಳ್ಳಸಾಗಣೆ: ನ್ಯಾಯಬೆಲೆ ಅಂಗಡಿ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 20:37 IST
Last Updated 4 ಆಗಸ್ಟ್ 2021, 20:37 IST

ಬೆಂಗಳೂರು: ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಲು ಹಂಚಿಕೆ ಮಾಡಿದ್ದ ಅಕ್ಕಿ ಮತ್ತು ರಾಗಿಯನ್ನು ಕಾಳಸಂತೆಗೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿರುವ ಕಾರಣದಿಂದ ಮಂಜುನಾಥ ನಗರದ ಮಂಜುನಾಥ ಸ್ಟೋರ್ಸ್‌ (ಬಿಎಲ್‌ಡಬ್ಲ್ಯು–190) ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಬೆಂಗಳೂರು ಪಶ್ಚಿಮ ವಿಭಾಗದ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ನೇತೃತ್ವದ ತನಿಖಾ ದಳ ಜುಲೈ 15ರಂದು ಯಶವಂತಪುರದ ಆರ್‌.ಎಂ.ಸಿ. ಯಾರ್ಡ್‌ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ (ಕೆಎಫ್‌ಸಿಎಸ್‌ಸಿ) ಉಗ್ರಾಣಗಳ ಮೇಲೆ ದಾಳಿಮಾಡಿ, ತಪಾಸಣೆ ನಡೆಸಿತ್ತು. ಆಗ, ಮಂಜುನಾಥ ಸ್ಟೋರ್ಸ್‌ ನ್ಯಾಯಬೆಲೆ ಅಂಗಡಿ ಹೆಸರಿನಲ್ಲಿ ಕೆಎಫ್‌ಸಿಎಸ್‌ಸಿಯ ಎನ್‌ಜಿಜಿ–1 ಉಗ್ರಾಣದಲ್ಲಿ ಬಿಲ್‌ ಮಾಡಲಾಗಿದ್ದ 95 ಕ್ವಿಂಟಲ್‌ ಪಡಿತರ ಅಕ್ಕಿ ಮತ್ತು ಲಾರಿಗಳನ್ನು ಬಿಟ್ಟು ನ್ಯಾಯಬೆಲೆ ಅಂಗಡಿ ಮಾಲೀಕರು ಪರಾರಿಯಾಗಿದ್ದರು.

ಕಾಳಸಂತೆಗೆ ಪಡಿತರ ಧಾನ್ಯ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ನ್ಯಾಯಬೆಲೆ ಅಂಗಡಿ ಮಾಲೀಕ ಲಕ್ಷ್ಮೀನಾರಾಯಣ, ಲಾರಿ ಮಾಲೀಕರಾದ ಮಲ್ಲಿಕಾರ್ಜುನ, ಮುನಿರಾಜು ಹಾಗೂ ಪಡಿತರ ರಾಗಿ ಸಾಗಿಸುತ್ತಿದ್ದ ಮತ್ತೊಂದು ಲಾರಿ ಮಾಲೀಕ ಫಯಾಜ್‌ ಸೇರಿದಂತೆ ಹಲವರ ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ADVERTISEMENT

ಪಡಿತರ ಧಾನ್ಯ ಕಳ್ಳಸಾಗಣೆ ಆರೋಪದಡಿ ಮಂಜುನಾಥ ಸ್ಟೋರ್ಸ್‌ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧವೇ ಕ್ರಿಮಿನಲ್‌ ಪ್ರಕರಣ ದಾಖಲಾಗಿರುವ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದರು. ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿರುವ ಇಲಾಖೆಯ ಬೆಂಗಳೂರು ಪಶ್ಚಿಮ ವಿಭಾಗದ ಉಪ ನಿರ್ದೇಶಕ ರಘು, ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಅಂಗಡಿಯಲ್ಲಿ ಅಂತ್ಯೋದಯ ಅನ್ನ ಯೋಜನೆಯ 12 ಮತ್ತು ಆದ್ಯತಾ ವಲಯದ 318 ಕುಟುಂಬಗಳಿಗೆ ಜುಲೈ ತಿಂಗಳಿನಲ್ಲಿ ಪಡಿತರ ವಿತರಿಸಿಲ್ಲ. ಬಾಕಿ ಉಳಿದಿರುವ ಆಹಾರ ಧಾನ್ಯವನ್ನು ವಶಕ್ಕೆ ಪಡೆಯುವಂತೆ ಹಾಗೂ ಈ ಅಂಗಡಿಯ ವ್ಯಾಪ್ತಿಯಲ್ಲಿದ್ದ ಪಡಿತರ ಚೀಟಿದಾರರಿಗೆ ಬೇರೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ವ್ಯವಸ್ಥೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.