ADVERTISEMENT

ಪೀಣ್ಯ ಮೇಲ್ಸೇತುವೆ ಬಂದ್‌: ವಾಹನ ಸವಾರರು ಹೈರಾಣ

ತುಮಕೂರು ರಸ್ತೆಯಲ್ಲಿ ವಿಪರೀತ ದಟ್ಟಣೆ, ಇನ್ನೂ ಎರಡು ದಿನ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 22:01 IST
Last Updated 17 ಜನವರಿ 2024, 22:01 IST
ರಾಷ್ಟ್ರೀಯ ಹೆದ್ದಾರಿ–4 ತುಮಕೂರು ರಸ್ತೆಯಲ್ಲಿ ಉಂಟಾಗಿರುವ ವಾಹನ ದಟ್ಟಣೆ. 
ರಾಷ್ಟ್ರೀಯ ಹೆದ್ದಾರಿ–4 ತುಮಕೂರು ರಸ್ತೆಯಲ್ಲಿ ಉಂಟಾಗಿರುವ ವಾಹನ ದಟ್ಟಣೆ.    

ಬೆಂಗಳೂರು: ಟ್ರಕ್‌ಗಳಿಗೆ ಮಣ್ಣು ಹೇರಿ ಪೀಣ್ಯ ಮೇಲ್ಸೇತುವೆಯ ‘ಸಾಮರ್ಥ್ಯ ಪರೀಕ್ಷೆ’ ನಡೆಸಲಾಗುತ್ತಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಉಂಟಾಗಿದ್ದು ವಾಹನ ಸವಾರರು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿ–4ರ ತುಮಕೂರು ರಸ್ತೆಯಲ್ಲಿ ಪೀಣ್ಯದಿಂದ ಕೆನ್ನಮೆಟಲ್‌(ವಿಡಿಯಾ) ಹಾಗೂ ಕೆನ್ನಮೆಟಲ್‌ನಿಂದ ಪೀಣ್ಯದವರೆಗೆ ಮೇಲ್ಸೇತುವೆ ಪಕ್ಕದ ರಾಷ್ಟ್ರೀಯ ಹೆದ್ದಾರಿ–4 ಹಾಗೂ ಸರ್ವೀಸ್‌ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಗರದ ಒಳಕ್ಕೆ ಬರುವ ಹಾಗೂ ಹೊರಹೋಗುವ ಮಾರ್ಗದ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಬುಧವಾರ ಸಂಜೆ 4ರಿಂದ ರಾತ್ರಿವರೆಗೆ ವಿಪರೀತ ದಟ್ಟಣೆ ಉಂಟಾಗಿ, ಸಾಕಷ್ಟು ಸಮಸ್ಯೆ ಎದುರಾಗಿತ್ತು.

ನಾಗಸಂದ್ರ, 8ನೇ ಮೈಲಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಜಂಕ್ಷನ್‌ ಮೂಲಕ ಗೊರಗುಂಟೆಪಾಳ್ಯ ತಲುಪುವುದಕ್ಕೆ ವಾಹನ ಸವಾರರು ಪರದಾಡುವಂತಾಗಿದೆ. ನಗರ ಪ್ರವೇಶಿಸುವ ಮೊದಲು ಸಿಗುವ ಟೋಲ್‌ಗೇಟ್ (ವಿಡಿಯಾ ಸಮೀಪ)ನಿಂದಲೇ ವಾಹನ ದಟ್ಟಣೆ ಆರಂಭವಾಗಿದೆ. ಕೆಲವು ವಾಹನಗಳು ದಾಸರಹಳ್ಳಿ ಒಳಭಾಗದ ರಸ್ತೆಯಿಂದ ಪೈಪ್‌ಲೈನ್‌ ರಸ್ತೆಯ ಮೂಲಕ ನಗರದ ಒಳಕ್ಕೆ ಬರುತ್ತಿವೆ. ಇದರಿಂದ ಸಣ್ಣಪುಟ್ಟ ರಸ್ತೆಗಳಲ್ಲಿ ದಟ್ಟಣೆಯಿದೆ.

ADVERTISEMENT

ಜ.19ರ ವರೆಗೂ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧವಿದ್ದು, ಇದೇ ಪರಿಸ್ಥಿತಿ ಇರಲಿದೆ ಎಂದು ಸಂಚಾರ ಪೊಲೀಸರು ಹೇಳಿದರು. 20ಕ್ಕೂ ಹೆಚ್ಚು ಜಿಲ್ಲೆ, ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಸಾವಿರಾರು ವಾಹನಗಳು ಮೇಲ್ಸೇತುವೆ ಪಕ್ಕದ ಎನ್‌ಎಚ್‌–4 ರಸ್ತೆ, ಸರ್ವೀಸ್‌ ರಸ್ತೆಯಲ್ಲೇ ನಗರಕ್ಕೆ ಬರುತ್ತಿವೆ. ಆಂಬುಲೆನ್ಸ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿ ರೋಗಿಗಳು ಪರದಾಡುತ್ತಿದ್ದಾರೆ.

‘ಸಾಮರ್ಥ್ಯ ಪರೀಕ್ಷೆಗೆ 16 ಟ್ರಕ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಎರಡು ಪಿಲ್ಲರ್‌ಗಳ ನಡುವೆ ಟ್ರಕ್‌ಗಳನ್ನು ನಿಲುಗಡೆ ಮಾಡಲಾಗಿದ್ದು, 14 ಟ್ರಕ್‌ಗಳಿಗೆ ತಲಾ 30 ಟನ್‌ ಹಾಗೂ ಉಳಿದ ಎರಡು ಟ್ರಕ್‌ಗಳಿಗೆ ತಲಾ 34 ಟನ್‌ ಭಾರ ಹೇರಲಾಗಿದೆ. ಟ್ರಕ್‌ಗಳನ್ನು ಹಂತ ಹಂತವಾಗಿ ತಂದು ನಿಲುಗಡೆ ಮಾಡಲಾಗುತ್ತಿದೆ. ಆ ಹಂತದಲ್ಲಿ ಪಿಲ್ಲರ್‌ನಲ್ಲಿ ಅಳವಡಿಸಲಾಗಿರುವ ಸ್ಪ್ರಿಂಗ್‌ಗಳು ಎಷ್ಟು ಕೆಳಕ್ಕೆ ಹೋಗಿವೆ ಎಂಬುದನ್ನು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಹಾಗೂ ತಜ್ಞರು ನಮೂದಿಸಿಕೊಳ್ಳುತ್ತಿದ್ದಾರೆ. ಹೀಗೆ ಇನ್ನೂ ಎರಡು ದಿನ ಪರೀಕ್ಷೆ ನಡೆಸಲಾಗುವುದು’ ಎಂದು ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ ಚಂದ್ರ ಕಿಶನ್‌ ತಿಳಿಸಿದರು.

ಪರೀಕ್ಷೆ ಯಶಸ್ವಿಯಾದರೆ ಇದೇ 20 ಅಥವಾ 21ರಿಂದ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನಗಳ ಸಂಚಾರಕ್ಕೆ ಅವಕಾಶ ಲಭಿಸುವ ಸಾಧ್ಯತೆಯಿದೆ.

8ನೇ ಮೈಲಿನ ಜಂಕ್ಷನ್‌ನ 102 ಹಾಗೂ 103ನೇ ಪಿಲ್ಲರ್‌ ನಡುವೆ ಮೂರು ಕೇಬಲ್‌ಗಳು ಬಾಗಿದ್ದರಿಂದ 2021ರ ಡಿಸೆಂಬರ್‌ನಿಂದ ಸಣ್ಣ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಲಾರಿ, ಬಸ್‌, ಸರಕು ಸಾಗಣೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಪಿಲ್ಲರ್‌ನಲ್ಲಿ ಅಳವಡಿಸಲಾಗಿರುವ ಸ್ಪ್ರಿಂಗ್‌ಗಳು ಎಷ್ಟು ಕೆಳಕ್ಕೆ ಹೋಗಿವೆ ಎಂಬುದನ್ನು ಅಳೆಯುತ್ತಿರುವ ಸಾಧನ. ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ 
ಪೀಣ್ಯ ಮೇಲ್ಸೇತುವೆಯಲ್ಲಿ ನಿಂತಿರುವ ಭಾರ ತುಂಬಿದ ಟ್ರಕ್‌ಗಳು ಹಾಗೂ ಪಕ್ಕದ ರಸ್ತೆಯಲ್ಲಿ ಸಾಲುಗಟ್ಟಿ ಸಾಗುತ್ತಿರುವ ವಾಹನಗಳು. ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ 

240 ಕೇಬಲ್ ಅಳವಡಿಕೆ

ಮೇಲ್ಸೇತುವೆಯಲ್ಲಿ 120 ಪಿಲ್ಲರ್‌ಗಳಿವೆ. ಮೊದಲ ಹಂತದ ದುರಸ್ತಿ ವೇಳೆ 240 ಕೇಬಲ್‌ ಅಳವಡಿಕೆ ಮಾಡಲಾಗಿದೆ. ಸೇತುವೆಯ ಭಾರ ತಡೆದುಕೊಳ್ಳುವ ಸಾಮರ್ಥ್ಯದ ಪರೀಕ್ಷೆ ಯಶಸ್ವಿಯಾದರೆ ವಾಹನ ಸಂಚಾರಕ್ಕೆ ಅವಕಾಶ ನೀಡಿ 1200 ಕೇಬಲ್‌ಗಳನ್ನು ಬದಲಾವಣೆ ಮಾಡಲಾಗುವುದು ಎಂದು ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.