ADVERTISEMENT

ಪೀಣ್ಯ ಮೇಲ್ಸೇತುವೆ: ಭಾರಿ ವಾಹನ ಸಂಚಾರಕ್ಕೆ ಅವಕಾಶ ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:45 IST
Last Updated 3 ಏಪ್ರಿಲ್ 2024, 15:45 IST
ಪೀಣ್ಯ ಮೇಲ್ಸೇತುವೆ.
ಪೀಣ್ಯ ಮೇಲ್ಸೇತುವೆ.   

ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಗೆ ಹೊಸದಾಗಿ ಅಳವಡಿಸಿರುವ 240 ಕೇಬಲ್‌ಗಳಿಂದ ಮೇಲ್ಸೇತುವೆ ಸಾಮರ್ಥ್ಯ ಹೆಚ್ಚಿದ್ದು ಸದ್ಯದಲ್ಲೇ ಈ ಮೇಲ್ಸೇತುವೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆಯಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ತಜ್ಞರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಭಾರಿ ವಾಹನ ಸಂಚಾರಕ್ಕೆ ಅನುಮತಿ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

‘ಪೀಣ್ಯ– ಕೆನ್ನಮೆಟಲ್‌ (ವಿಡಿಯಾ) ನಡುವೆ ಈ ಮೇಲ್ಸೇತುವೆ ಹಾದುಹೋಗಿದ್ದು, 120 ಪಿಲ್ಲರ್‌ಗಳಿವೆ. ಸ್ಪ್ಯಾನ್‌ಗಳ ನಡುವೆ ಇರುವ ಹಳೆಯದಾದ 1,200 ಕೇಬಲ್‌ಗಳನ್ನು ಬದಲಾವಣೆ ಮಾಡಬೇಕಿದೆ. ಕೇಬಲ್‌ ಬದಲಾವಣೆ ಮಾಡಿದ ಮೇಲೆ ಕಾಂಕ್ರೀಟ್‌ ಹಾಕಬೇಕು. ಕಾಂಕ್ರೀಟ್‌ ಭದ್ರಗೊಳ್ಳಲು 5 ತಾಸು ಬೇಕಿದ್ದು ರಾತ್ರಿ ವೇಳೆ ಕಾಮಗಾರಿ ನಡೆಸಲಾಗುವುದು. ಹೀಗಾಗಿ, ರಾತ್ರಿ ವೇಳೆ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸುವಂತೆ ಸಂಚಾರ ಪೊಲೀಸರನ್ನು ಕೋರಲಾಗಿದೆ. ಪೊಲೀಸರು ಅನುಮತಿ ನೀಡಿದರೆ ರಾತ್ರಿ ವೇಳೆ ಎಲ್ಲ ವಾಹನ ಸಂಚಾರ ನಿರ್ಬಂಧಿಸಿ ಕಾಮಗಾರಿ ನಡೆಸಲಾಗುವುದು. ಎಲ್ಲ ಕೇಬಲ್‌ಗಳನ್ನು ಬದಲಾವಣೆ ಮಾಡಿದರೆ ಸೇತುವೆ ಮತ್ತಷ್ಟು ಭದ್ರವಾಗಲಿದೆ’ ಎಂದು ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ ಚಂದ್ರಕಿಶನ್‌ ತಿಳಿಸಿದ್ದಾರೆ.

ADVERTISEMENT

ಮೇಲ್ಸೇತುವೆ 8ನೇ ಮೈಲಿನ ಜಂಕ್ಷನ್‌ ಸಮೀಪದ 102 ಹಾಗೂ 103ನೇ ಪಿಲ್ಲರ್‌ನಲ್ಲಿ ಕೇಬಲ್‌ಗಳು ಬಾಗಿದ್ದರಿಂದ 2021ರ ಡಿಸೆಂಬರ್‌ನಿಂದ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ನಂತರ, ತಜ್ಞರ ಅನುಮತಿ ಪಡೆದು, ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.