ADVERTISEMENT

ದಾರಿಯಲ್ಲಿ ಸಿಕ್ಕ ಪೆನ್‌ಡ್ರೈವ್‌: ಬ್ಲ್ಯಾಕ್‌ಮೇಲ್ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 1:06 IST
Last Updated 25 ಡಿಸೆಂಬರ್ 2022, 1:06 IST
ಶೋಯೆಬ್
ಶೋಯೆಬ್   

ಬೆಂಗಳೂರು: ದಾರಿಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿದ್ದ ಯುವತಿಯೊಬ್ಬರ ಖಾಸಗಿ ಫೋಟೊ ಹಾಗೂ ವಿಡಿಯೊ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಶೋಯೆಬ್ ಮೊಹಮ್ಮದ್ ಎಂಬುವರನ್ನು ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಯುವತಿಯೊಬ್ಬರು ಬ್ಲ್ಯಾಕ್‌ಮೇಲ್ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಶೋಯೆಬ್‌ನನ್ನು ಬಂಧಿಸಲಾಗಿದೆ. ಈತನಿಂದ ಪೆನ್‌ಡ್ರೈವ್ ಹಾಗೂ ಸಿಮ್‌ಕಾರ್ಡ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಯುವತಿ ಕೆಲಸ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲೇ ಅವರ ಬ್ಯಾಗ್‌ನಿಂದ ಪೆನ್‌ಡ್ರೈನ್‌ ದಾರಿಯಲ್ಲಿ ಬಿದ್ದು ಕಳೆದುಹೋಗಿತ್ತು. ಎಷ್ಟೇ ಹುಡುಕಿದರೂ ಪೆನ್‌ಡ್ರೈವ್ ಪತ್ತೆಯಾಗಿರಲಿಲ್ಲ. ಎಲ್ಲಿಯಾದರೂ ಬಿದ್ದಿರಬಹುದೆಂದು ಯುವತಿ ಸುಮ್ಮನಾಗಿದ್ದರು’ ಎಂದು ತಿಳಿಸಿದರು.

ADVERTISEMENT

₹ 70 ಸಾವಿರಕ್ಕೆ ಬ್ಲ್ಯಾಕ್‌ಮೇಲ್: ‘ಪೇಂಟರ್ ಕೆಲಸ ಮಾಡುತ್ತಿದ್ದ ಆರೋಪಿ ಶೋಯೆಬ್‌ ರಸ್ತೆಯಲ್ಲಿ ಹೋಗುವಾಗ ಪೆನ್‌ಡ್ರೈವ್ ಸಿಕ್ಕಿತ್ತು. ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದ ಆರೋಪಿ, ಕಂಪ್ಯೂಟರ್‌ ಮೂಲಕ ಪರಿಶೀಲಿಸಿದ್ದ. ಅದರಲ್ಲಿ ಯುವತಿಯ ಖಾಸಗಿ ಫೋಟೊ, ವಿಡಿಯೊಗಳು ಇದ್ದವು. ಅವುಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರೋಪಿ ಯೋಚಿಸಿದ್ದ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಯುವತಿ ಸ್ನೇಹಿತೆಯೊಬ್ಬರ ಜೊತೆ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡಿದ್ದ ಸ್ಕ್ರೀನ್ ಶಾಟ್ ಪೆನ್‌ಡ್ರೈವ್‌ನಲ್ಲಿತ್ತು. ಅದರಲ್ಲಿ ನಮೂದಾಗಿದ್ದ ಯುವತಿ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಫೋಟೊ ಹಾಗೂ ವಿಡಿಯೊಗಳು ನನ್ನ ಬಳಿ ಇವೆ. ನಾನು ಹೇಳಿದ ಖಾತೆಗೆ ₹ 70 ಸಾವಿರ ಜಮೆ ಮಾಡಿ. ಇಲ್ಲದಿದ್ದರೆ, ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದಿದ್ದ.’

‘ಆತಂಕಗೊಂಡಿದ್ದ ಯುವತಿ ಠಾಣೆಗೆ ಮಾಹಿತಿ ನೀಡಿದ್ದರು. ತ್ವರಿತ ಕಾರ್ಯಾಚರಣೆ ಕೈಗೊಂಡು ತಾಂತ್ರಿಕ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.