ADVERTISEMENT

ಪಿಂಚಣಿ ಹೋರಾಟ 50ನೇ ದಿನಕ್ಕೆ: ಸಚಿವರ ಸಭೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 19:30 IST
Last Updated 25 ನವೆಂಬರ್ 2022, 19:30 IST
ರಾಜ್ಯ ಅನುದಾನಿತ ಶಾಲಾ- ಕಾಲೇಜುಗಳ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ‌ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಶುಕ್ರವಾರ ಬೆಂಬಲ ವ್ಯಕ್ತಪಡಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಪ್ರತಿಭಟನಾನಿರತರ ಜೊತೆ ಸೇರಿ ಘೋಷಣೆ ಕೂಗಿದರು – ಪ್ರಜಾವಾಣಿ ಚಿತ್ರ
ರಾಜ್ಯ ಅನುದಾನಿತ ಶಾಲಾ- ಕಾಲೇಜುಗಳ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ‌ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಶುಕ್ರವಾರ ಬೆಂಬಲ ವ್ಯಕ್ತಪಡಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಪ್ರತಿಭಟನಾನಿರತರ ಜೊತೆ ಸೇರಿ ಘೋಷಣೆ ಕೂಗಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಿಂಚಣಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ನಗರದ ಸ್ವಾತಂತ್ರ್ಯ ‌ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 50ನೇ ದಿನ ಪೂರೈಸಿತು. ಇದರ ಬೆನ್ನಲ್ಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರು ಮುಖಂಡರ ಸಭೆ ನಡೆಸಿ ಸಮಸ್ಯೆ ಆಲಿಸಿದರು.

ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

‘ರಾಜ್ಯದ ಪ್ರತಿಯೊಬ್ಬ ಅನುದಾನಿತ ನೌಕರರಿಗೂ ‘ಹಳೆಯ ನಿಶ್ಚಿತ ಪಿಂಚಣಿ’ ಸೌಲಭ್ಯ ನೀಡಬೇಕು. ಸರ್ಕಾರಿ ಹಾಗೂ ಅನುದಾನಿತ ನೌಕರರ ಮಧ್ಯೆ ಯಾವುದೇ ತಾರತಮ್ಯ ಮಾಡದೇ ಆರೋಗ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸುತ್ತಿದ್ದಾರೆ.

ADVERTISEMENT

ವಿಧಾನಪರಿಷತ್ ಸದಸ್ಯರಾದ ಎಸ್‌.ವಿ. ಸಂಕನೂರು, ಶಶೀಲ್ ನಮೋಶಿ, ಆಯನೂರು ಮಂಜುನಾಥ್, ಪುಟ್ಟಣ್ಣ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದರು.

ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸುತ್ತೇನೆ. ಬೇಡಿಕೆ ಈಡೇರದಿದ್ದರೆ, ಬೇರೆ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಗಂಭೀರ ಮಾಡುವ ಭೂಮಿಕೆ ಸಿದ್ಧಪಡಿಸಿ’ ಎಂದು ಪ್ರತಿಭಟನಕಾರರಿಗೆ ಕರೆ ನೀಡಿದರು.

‘ಮುಂದಿನ ಪ್ರಜೆಗಳನ್ನು ಸೃಷ್ಟಿಸುವ ಶಿಕ್ಷಕರಿಗೆ ಅನ್ಯಾಯ ಮಾಡಬಾರದು. ಅನುದಾನಿತ ಶಾಲಾ- ಕಾಲೇಜುಗಳ ನೌಕರರಿಗೆ ಪಿಂಚಣಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಚಿವರ ಸಭೆ: ಸಂಘದ ಮುಖಂಡರನ್ನು ತಮ್ಮ ಕಚೇರಿಗೆ ಆಹ್ವಾನಿಸಿದ್ದ ಸಚಿವ ಬಿ.ಸಿ. ನಾಗೇಶ್, ಬೇಡಿಕೆಗಳ ಬಗ್ಗೆ ಚರ್ಚಿಸಿದರು.

‘ಪಿಂಚಣಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಾಗುವುದು’ ಎಂದು ನಾಗೇಶ್ ಭರವಸೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖಂಡರು, ‘ಬೇಡಿಕೆ ಈಡೇರಿಕೆಯಾಗುವವರೆಗೂ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿ ಸಭೆಯಿಂದ ಹೊರನಡೆದರು. ಪ್ರತಿಭಟನೆ ಯಥಾಪ್ರಕಾರ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.