ADVERTISEMENT

ಕೋವಿಡ್-19: ‘ಜನರ ಸಹಕಾರದಿಂದ 2ನೇ ಅಲೆ ತಡೆ ಸಾಧ್ಯ’

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:29 IST
Last Updated 22 ನವೆಂಬರ್ 2020, 20:29 IST
ಡಾ.ಆರ್. ರವೀಂದ್ರ ಅವರು ಡಾ. ಪ್ರಸನ್ನ ಎಚ್.ಎಂ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಡಾ.ಆರ್. ರವೀಂದ್ರ ಅವರು ಡಾ. ಪ್ರಸನ್ನ ಎಚ್.ಎಂ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.   

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಇಳಿಮುಖ ಕಂಡಿದೆ. ಈ ಅವಧಿಯಲ್ಲಿ ಮೈಮರೆಯದೆಯೇ ಸರ್ಕಾರದ ಮಾರ್ಗಸೂಚಿಗಳನ್ನು ಜನತೆ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಎರಡನೇ ಅಲೆ ಬರದಂತೆ ತಡೆಯಲು ಸಾಧ್ಯ’ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ (ಫಾನಾ) ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೋವಿಡ್ 2ನೇ ಅಲೆ ಬರದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಎರಡನೇ ಅಲೆ ಕಾಣಿಸಿಕೊಂಡಲ್ಲಿ ಪುನಃ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಲಾಗುವುದು’ ಎಂದರು.

ಫಾನಾದ ನೂತನ ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ., ‘ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರ ಆರೈಕೆಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲಿವೆ. ಯಾವುದೇ ಸಂದರ್ಭದಲ್ಲಿ ಕೋವಿಡ್ ಹಾಸಿಗೆಗಳ ಅಗತ್ಯ ಬಿದ್ದಲ್ಲಿ ಐದು ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಶೇ 70 ರಷ್ಟು ಚಿಕಿತ್ಸಾ ವೆಚ್ಚವನ್ನು ಬಾಕಿ ಉಳಿಸಿಕೊಳ್ಳಲಾಗಿದ್ದು, ಮರುಪಾವತಿಗೆ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ನಿಕಟಪೂರ್ವ ಅಧ್ಯಕ್ಷ ಡಾ.ಆರ್. ರವೀಂದ್ರ, ‘ಆರೋಗ್ಯ ರಕ್ಷಣೆಗಾಗಿ ಬಿಬಿಎಂಪಿ‌ಯಿಂದ ಪಡೆಯಬೇಕಿರುವ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿ, ಏಕಗವಾಕ್ಷಿ ಪದ್ದತಿ ಜಾರಿಗೊಳಿಸಬೇಕು’ ಎಂದರು.

ಫಾನಾದ ನೂತನ ಪದಾಧಿಕಾರಿಗಳು 2020–22
ಅಧ್ಯಕ್ಷ:
ಡಾ. ಪ್ರಸನ್ನ ಎಚ್.ಎಂ.
ಚುನಾಯಿತ ಅಧ್ಯಕ್ಷ: ಡಾ. ಗೋವಿಂದಯ್ಯ ಯತೀಶ್
ಉಪಾಧ್ಯಕ್ಷೆ: ಡಾ. ಶೋಭಾ ಪ್ರಕಾಶ್
ಕಾರ್ಯದರ್ಶಿ: ಡಾ. ರಾಜಶೇಖರ ವೈ.ಎಲ್.
ಜಂಟಿ ಕಾರ್ಯದರ್ಶಿ: ಡಾ.ಜಿ.ವಿ. ದಿವಾಕರ್
ಖಜಾಂಚಿ: ಡಾ.ಎಂ.ಎಲ್. ಗಿರಿಧರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.