ADVERTISEMENT

ಹೊಸ ವರ್ಷ ಆಚರಣೆಗೆ ಕರ್ಫ್ಯೂ ಅಡ್ಡಿ: ಹೊರವಲಯದ ರೆಸಾರ್ಟ್‌ಗಳತ್ತ ಮುಗಿಬಿದ್ದ ಜನ

ರಾತ್ರಿ ಕರ್ಫ್ಯೂನಿಂದ ಹೊಸ ವರ್ಷ ಆಚರಣೆಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 20:08 IST
Last Updated 30 ಡಿಸೆಂಬರ್ 2021, 20:08 IST
ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಪೊಲೀಸರು –ಪ್ರಜಾವಾಣಿ ಚಿತ್ರ
ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಪೊಲೀಸರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾತ್ರಿ ಕರ್ಫ್ಯೂ ಕಾರಣದಿಂದ ನಗರದಲ್ಲಿ ಹೊಸ ವರ್ಷಾಚರಣೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ನಗರದ ಜನರು ಈಗ ಹೊರ ವಲಯದ ರೆಸಾರ್ಟ್‌ಗಳಿಗೆ ಮುಗಿಬಿದ್ದಿದ್ದಾರೆ. ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗದೇ ಅಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರಿಂದಎರಡು ತಿಂಗಳ ಹಿಂದೆ ರಾತ್ರಿ ಕರ್ಫ್ಯೂ ತೆರವುಗೊಳಿಸಿದ್ದ ಸರ್ಕಾರ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಕರಣಗಳ ಹೆಚ್ಚಾಗುವು ದನ್ನು ತಡೆಯಲು ರಾತ್ರಿ ಕರ್ಫ್ಯೂ ಮೊರೆಹೋಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸವರ್ಷಾಚರಣೆಯನ್ನು ನಿಷೇಧಿಸಿದೆ.

ಮಂಗಳವಾರದಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಬುಧವಾರದಿಂದ ಸಾರ್ವಜನಿಕರ ರಾತ್ರಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಾತ್ರಿ 10ರ ಬಳಿಕ ರಸ್ತೆಯಲ್ಲಿ ಓಡಾಡುವ ಜನರನ್ನು ಪ್ರಶ್ನಿಸುತ್ತಿದ್ದಾರೆ. ಮದ್ಯಪಾನ ಮಾಡಿ ಚಾಲನೆ ಮಾಡುವ ವಾಹನ ಸವಾರರ ಅಡ್ಡಗಟ್ಟಿ ದಂಡ ವಿಧಿಸುತ್ತಿದ್ದಾರೆ.

ADVERTISEMENT

ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿ ನಗರದ ಪ್ರಮುಖ ಪಬ್‌ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದವರು ಈಗ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊರ ವಲಯದ ರೆಸಾರ್ಟ್‌ಗಳತ್ತ ಮುಖ ಮಾಡಿದ್ದಾರೆ.‌

ಕರ್ಫ್ಯೂ ಜಾರಿಗೂ ಮುನ್ನವೇ ಹಲವರು ರೆಸಾರ್ಟ್‌ಗಳನ್ನು ಬುಕ್ ಮಾಡಿಕೊಂಡಿದ್ದರು. ಕರ್ಫ್ಯೂ ಜಾರಿಯಾದ ಬಳಿಕ ರೆಸಾರ್ಟ್‌ಗಳನ್ನು ತಡಕಾಡುವ ಜನರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಸ್ಥಳಾವಕಾಶ ಸಿಕ್ಕರೆ, ಹಲವರಿಗೆ ಸಿಗುತ್ತಿಲ್ಲ. ಸಾಮರ್ಥ್ಯಕ್ಕಿಂತ ಶೇ 50ರಷ್ಟು ಮಾತ್ರ ಅತಿಥಿಗಳಿಗೆ ಅವಕಾಶ ನೀಡಬೇಕು ಎಂಬ ನಿಯಮ ಇರುವುದರಿಂದ ರೆಸಾರ್ಟ್‌ಗಳಲ್ಲಿ ಅವಕಾಶ ಸಿಗದಂತಾಗಿದೆ. ಸಿಕ್ಕರೂ ದುಬಾರಿ ದರ ನಿಗದಿ ವಿಧಿಸಲಾಗುತ್ತಿದೆ.

ಸರ್ಕಾರದ ಬಿಗಿ ಕ್ರಮಗಳು ಈ ಬಾರಿಯ ಹೊಸ ವರ್ಷಾಚರಣೆಯನ್ನು ಇನ್ನಷ್ಟು ದುಬಾರಿಯಾಗಿಸಿದೆ ಎನ್ನುತ್ತಾರೆ ನಗರದ ನಿವಾಸಿಗಳು.

‌‌ರೆಸಾರ್ಟ್‌ಗಳಿಗೆ ಹೋಗಿ ವಾಸ್ತವ್ಯ ಹೂಡುವ ಆರ್ಥಿಕ ಶಕ್ತಿ ಇಲ್ಲದವರು ಮನೆ– ಮನೆಗಳಲ್ಲೇ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಅವಿವಾಹಿತ ಯುವಕರ ಮನೆಗಳು, ರೂಂಗಳೇ ಪಾರ್ಟಿ ಹಾಲ್‌ಗಳಾಗಿ ಪರಿವರ್ತನೆಗೊಳ್ಳಲು ಸಜ್ಜಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.