ADVERTISEMENT

ಬಿಬಿಎಂಪಿ ವಿಭಜಿಸಿದರೆ ಜನಾಂದೋಲನ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 16:05 IST
Last Updated 9 ಸೆಪ್ಟೆಂಬರ್ 2024, 16:05 IST
‘ಗ್ರೇಟರ್‌ ಬೆಂಗಳೂರು ಆಡಳಿತ’ (ಜಿಬಿಜಿ) ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು
‘ಗ್ರೇಟರ್‌ ಬೆಂಗಳೂರು ಆಡಳಿತ’ (ಜಿಬಿಜಿ) ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು   

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಆಡಳಿತದ ಹೆಸರಿನಲ್ಲಿ ವಿಭಜಿಸಬಾರದು.  ಇಂತಹ ಕಾರ್ಯಕ್ಕೆ ಸರ್ಕಾರ ಮುಂದಾದರೆ ನಗರದಲ್ಲಿ ಜನಾಂದೋಲನ ನಡೆಸಲಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

ರಾಜ್ಯ ಸರ್ಕಾರ ‘ಗ್ರೇಟರ್‌ ಬೆಂಗಳೂರು ಆಡಳಿತ’ (ಜಿಬಿಜಿ) ಸ್ಥಾಪನೆಗೆ ಸಂಬಂಧಿಸಿದಂತೆ ಮಂಡಿಸಿರುವ ಮಸೂದೆಯ ಪ್ರಾತ್ಯಕ್ಷಿಕೆ ಮತ್ತು ಸಾಧಕ-ಬಾಧಕಗಳ ಕುರಿತು ಸೋಮವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಂಗಳೂರು ನಗರ ಕನ್ನಡಿಗರಿಗಾಗಿಯೇ ಇರಬೇಕು. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಕನ್ನಡದವರೇ ಮೇಯರ್‌ ಆಗಬೇಕು. ಇದಕ್ಕಾಗಿ ಬೆಂಗಳೂರು ವಿಭಜನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ವಿರೋಧಿಸುತ್ತವೆ’ ಎಂದು ತಿಳಿಸಿದರು. 

ADVERTISEMENT

ಬಿಬಿಎಂಪಿ ಅಡಿಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಜಲಮಂಡಳಿ, ಬಿಎಂಟಿಸಿ ಬರುವುದಿಲ್ಲ. ಇವೆಲ್ಲವೂ ಒಂದೆಡೆ ಬಂದು, ಬಿಬಿಎಂಪಿಯೇ ನಿರ್ವಹಣೆ ಮಾಡಿದರೆ ಪ್ರತ್ಯೇಕವಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದೂ ತಪ್ಪುತ್ತದೆ. ಸರ್ಕಾರಕ್ಕೆ ವೆಚ್ಚವೂ ಕಡಿಮೆಯಾಗುತ್ತದೆ. ಜನರಿಗೆ ಒಂದೆಡೆ ಎಲ್ಲ ಸೌಲಭ್ಯವೂ ಸಿಗುವಂತಾಗುತ್ತದೆ ಎಂದರು.

ರಾಜ್ಯ ಸರ್ಕಾರದ ಈ ಮಸೂದೆಯಿಂದ ಪುರಪಿತೃಗಳ ಅಧಿಕಾರ ಕುಂಠಿತವಾಗುವ ಅಪಾಯವಿದೆ. ಆದ್ದರಿಂದ ಬದಲಾವಣೆ ತರಬೇಕಿದೆ. ಈ ತಿದ್ದುಪಡಿ ಮಾಡಲು ಹಾಗೂ ವಾರ್ಡ್‌ ಹೆಚ್ಚಳಕ್ಕೆ ವಿಳಂಬವಾದರೆ ಹಿಂದಿನಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

‘ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬರೇ ಮೇಯರ್ ಇರಲಿ. ಅವರ ಅಧಿಕಾರಾವಧಿ ಎರಡೂವರೆ ವರ್ಷ ಅಥವಾ ಐದು ವರ್ಷ ನಿಗದಿಪಡಿಸಿದರೂ ಅಡ್ಡಿಯಿಲ್ಲ’ ಎಂದರು.

‘ತಜ್ಞರು ನೀಡಿರುವ ವರದಿಯಲ್ಲಿ ಶೇಕಡ 20ರಷ್ಟನ್ನು ಮಾತ್ರ ಸರ್ಕಾರ ಮಸೂದೆಯಲ್ಲಿ ಅಳವಡಿಸಿಕೊಂಡಿದೆ.  ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಈ ಮಸೂದೆ ಬಿದ್ದುಹೋಗುತ್ತದೆ ಎಂದು ನಗರ ಸಮಿತಿಯಲ್ಲಿರುವ ತಜ್ಞ ವಿ.ರವಿಚಂದರ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಲೋಪಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಒಪ್ಪದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

ಇದಕ್ಕೂ ಮುನ್ನ ‘ಗ್ರೇಟರ್‌ ಬೆಂಗಳೂರು’ ತಜ್ಞರ ಸಮಿತಿ ಸದಸ್ಯ ರವಿಚಂದರ್‌ ಅವರು ಜಿಬಿಜಿ ಮಸೂದೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ‘ಸಮಿತಿ ನೀಡಿದ್ದ ವರದಿ ಹಾಗೂ ರಾಜ್ಯ ಸರ್ಕಾರ ಮಂಡಿಸಿರುವ ಮಸೂದೆಗೆ ಸಾಕಷ್ಟು ವ್ಯತ್ಯಾಸವಿದೆ. ಸಮಿತಿಯ ಶೇ 20ರಷ್ಟು ಶಿಫಾರಸುಗಳನ್ನು ಮಾತ್ರ ಪರಿಗಣಿಸಲಾಗಿದೆ. ಸಮಿತಿಯ ಶಿಫಾರಸುಗಳನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು’ ಎಂದು ಹೇಳಿದರು.

ಬಿಜೆಪಿ ಶಾಸಕರಾದ ಡಾ. ಅಶ್ವತ್ಥನಾರಾಯಣ, ಮುನಿರತ್ನ, ಸಿ.ಕೆ. ರಾಮಮೂರ್ತಿ, ಕೆ. ಗೋಪಾಲಯ್ಯ, ಎಸ್‌.ಆರ್. ವಿಶ್ವನಾಥ್‌,  ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಟಿ.ಎ. ಶರವಣ, ಬಿಬಿಎಂಪಿ ಮಾಜಿ ಸದಸ್ಯರಾದ ಎಸ್‌. ನಟರಾಜ್‌, ಪದ್ಮನಾಭರೆಡ್ಡಿ, ಸದಾಶಿವ, ಸೋಮಶೇಖರ್‌, ಬಿ.ವಿ. ಗಣೇಶ್‌ ಪಾಲ್ಗೊಂಡಿದ್ದರು.

‘ಪಾಲಿಕೆಗೆ ಸದಸ್ಯರ ಆಯ್ಕೆಯಾಗಲಿ’

‘ನಾಲ್ಕು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆಸಿಲ್ಲ. ಮೊದಲು ಚುನಾವಣೆ ಮಾಡಿ. 225 ವಾರ್ಡ್‌ಗಳಿಗಾದರೂ ಮೊದಲು ಸದಸ್ಯರ ಆಯ್ಕೆಯಾಗಲಿ. ಅವರಿಗೆ ಎಲ್ಲ ರೀತಿಯ ಅಧಿಕಾರ ಕೊಡಿ’ ಎಂದು ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಆಗ್ರಹಿಸಿದರು. ‘ಮಸೂದೆಯಲ್ಲಿ ಪಾಲಿಕೆ ಹಾಗೂ ಪಾಲಿಕೆ ಸದಸ್ಯರ ಎಲ್ಲ ಅಧಿಕಾರವನ್ನೂ ಕಿತ್ತುಕೊಳ್ಳಲಾಗಿದೆ. ಇದರಿಂದ ಜನರಿಗೆ ಸೌಲಭ್ಯಗಳು ಸಿಗುವುದು ದುಸ್ತರವಾಗುತ್ತದೆ. ಸಮಸ್ಯೆಗಳ ನಿವಾರಣೆಗೂ ಅಡ್ಡಿಯಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.