ADVERTISEMENT

ಜನಪ್ರತಿನಿಧಿಗಳ ಜಟಾಪಟಿ; ಅಭಿವೃದ್ಧಿ ವಿಳಂಬ

ಜಾಲಹಳ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಎಚ್‌ಎಂಟಿ ವಾರ್ಡ್‌ ಸ್ಥಿತಿ l ಮೂಲಸೌಕರ್ಯಗಳ ಕೊರತೆ l ಶೀಘ್ರ ಬಗೆಹರಿಸಲು ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 5:17 IST
Last Updated 17 ಜನವರಿ 2020, 5:17 IST
ಯಶವಂತಪುರ ವಾರ್ಡ್‌ ವ್ಯಾಪ್ತಿ ಬಿ.ಕೆ.ನಗರದ ರಸ್ತೆ ದೂಳುಮಯವಾಗಿರುವುದು – ಪ್ರಜಾವಾಣಿ ಚಿತ್ರ/ಅನೂಪ್‌ ರಾಘ್ ಟಿ.
ಯಶವಂತಪುರ ವಾರ್ಡ್‌ ವ್ಯಾಪ್ತಿ ಬಿ.ಕೆ.ನಗರದ ರಸ್ತೆ ದೂಳುಮಯವಾಗಿರುವುದು – ಪ್ರಜಾವಾಣಿ ಚಿತ್ರ/ಅನೂಪ್‌ ರಾಘ್ ಟಿ.   

ಜಾಲಹಳ್ಳಿ ವಾರ್ಡ್ ಎಚ್‌ಎಂಟಿ ನೌಕರರ ವಸತಿ ಕಾಲೊನಿ, ಜಾಲಹಳ್ಳಿ, ಬಿಇಎಲ್ ನೌಕರರ ವಸತಿ ಕಾಲೊನಿ, ಖಾತಾ ನಗರ, ಸಿದ್ದಾರ್ಥ ನಗರ ಹಾಗೂ ಅಯ್ಯಪ್ಪ ನಗರ ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ. ಹೊರವರ್ತುಲ ರಸ್ತೆ ಇದೇ ವಾರ್ಡ್‌ನಲ್ಲಿ ಹಾದುಹೋಗಿದ್ದು, ವಾಹನಗಳ ದಟ್ಟಣೆಯಿಂದ ಜನರು ಹೈರಾಣಾಗಿದ್ದಾರೆ.

ವಾರ್ಡ್‌ನ ಹಲವೆಡೆ ಫುಟ್‌ಪಾತ್‌ ಒತ್ತುವರಿಯಿಂದ ಸಮಸ್ಯೆ ಹೆಚ್ಚಾಗಿದೆ. ಒತ್ತುವರಿ ಪ್ರಶ್ನಿಸುವವವರ ಮೇಲೆ ಹಲ್ಲೆ ನಡೆದ ಪ್ರಕರಣಗಳು ವರದಿಯಾಗಿವೆ. ಎಲ್ಲೆಂದರಲ್ಲಿ ಕಸ ಹಾಗೂ ತ್ಯಾಜ್ಯ ಎಸೆಯುತ್ತಿದ್ದು, ಅಲ್ಲೆಲ್ಲ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಜಾಲಹಳ್ಳಿಯ 5ನೇ ಅಡ್ಡರಸ್ತೆಯಲ್ಲಿ ಇತ್ತೀಚೆಗೆ ನಾಯಿಗಳು ಬೈಕ್‌ನಲ್ಲಿ ಹೊರಟಿದ್ದ ತಂದೆ– ಮಗನ ಮೇಲೆ ಎರಗಿ ಕಚ್ಚಿದ್ದವು. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ವಿದ್ಯುತ್ ದೀಪಗಳ ಕಂಬಗಳಲ್ಲೇ ತಂತಿಗಳು ಜೋತು ಬಿದ್ದಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿವೆ. ರಾತ್ರಿ 10.30ರಿಂದ ನಸುಕಿನವರೆಗೆ ಕೆಲ ಪ್ರದೇಶಗಳಲ್ಲಿ ಬೀದಿದೀಪಗಳನ್ನು ಆರಿಸಲಾಗುತ್ತಿದೆ. ಇದು ರಸ್ತೆಯಲ್ಲಿ ಸುಲಿಗೆ ಮಾಡುವವರಿಗೆ ಹಾಗೂ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬುದು ಸ್ಥಳೀಯರ ಆರೋಪ.

ಜೆ.ಪಿ.ಪಾರ್ಕ್ ವಾರ್ಡ್

ADVERTISEMENT

ಪೂರ್ಣಪ್ಪ ಗಾರ್ಡನ್, ಸುಂದರನಗರ, ಗೋಕುಲ್ ಎಕ್ಸ್‌ಟೆನ್ಶನ್, ಮುತ್ತ್ಯಾಲಮ್ಮ ನಗರ, ತನ್ನಿರಹಳ್ಳಿ, ಮತ್ತಿಕೆರೆ, ಎಸ್‌ಬಿಎಂ ಕಾಲೊನಿ, ಬೃಂದಾವನ ನಗರ, ಮೋಹನ್ ನಗರ ಹಾಗೂ ಎಚ್‌ಎಂಟಿ ಲೇಔಟ್ ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ. ಇಲ್ಲೆಲ್ಲ ಕಸ ಸಂಗ್ರಹ ವ್ಯವಸ್ಥೆ ಚೆನ್ನಾಗಿದೆ. ಆದರೆ, ಕೆಲವೆಡೆ ಜನರೇ ಖಾಲಿ ನಿವೇಶನಗಳಲ್ಲಿ ಕಸ ಎಸೆದು, ಬೆಂಕಿ ಹಚ್ಚುತ್ತಿದ್ದಾರೆ. ಇಂಥ ನಿವೇಶನಗಳಲ್ಲಿ ಹಂದಿ ಕಾಟ ಇದೆ. ಮಿನುಗುತಾರೆ ಕಲ್ಪನಾ ರಸ್ತೆಗೆ ಹೊಂದಿಕೊಂಡ ಜಾಗದಲ್ಲೇ ಚಿಕ್ಕ ಕೆರೆಯೊಂದಿದ್ದು, ನಿರ್ಮಾಣ ಅವಶೇಷಗಳನ್ನೆಲ್ಲ ತಂದು ಹಾಕಲಾಗುತ್ತಿದೆ.

ಶಂಕರನಾಗ್ ರೈಲ್ವೆ ಗೇಟ್‌ ಕೆಳಸೇತುವೆ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ. ರೈಲ್ವೆ ಇಲಾಖೆಗೆ ಸೇರಿದ್ದ ಜಾಗ ಈಗಾಗಲೇ ಬಿಬಿಎಂಪಿಗೆ ಹಸ್ತಾಂತರ ಆಗಿದೆ. ಕಾಮಗಾರಿ ಸ್ಥಳದಲ್ಲಿ ಖಾಸಗಿ ಜಾಗವಿದ್ದು, ಅದರ ಮಾಲೀಕರೀಗ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಫುಟ್‌ಪಾತ್‌ ಒತ್ತುವರಿಯೂ ಈ ವಾರ್ಡ್‌ನ ದೊಡ್ಡ ಸಮಸ್ಯೆ. ಯಶವಂತಪುರಕ್ಕೆ ಹೊಂದಿಕೊಂಡಿರುವ ಈ ವಾರ್ಡ್‌ನಲ್ಲಿ ಚೌಡೇಶ್ವರಿ ನಿಲ್ದಾಣವಿದ್ದು, ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ಇಂಥ ರಸ್ತೆಯ ಫುಟ್‌ಪಾತ್‌ ‘ಮಾಯ’ವಾಗಿದ್ದು, ಜನರು ರಸ್ತೆಯಲ್ಲೇ ಓಡಾಡುವಂತಾಗಿದೆ. ಇದರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸಿ ಪಾದಚಾರಿಗಳು ಆಸ್ಪತ್ರೆ ಸೇರುವಂತಾಗಿದೆ. ನಗರದ ಎರಡನೇ ದೊಡ್ಡ ಉದ್ಯಾನವಾದ ಜೆ.ಪಿ.ಪಾರ್ಕ್‌ನಲ್ಲಿ ಅಲಂಕಾರ ಹಾಗೂ ವ್ಯಾಯಾಮಕ್ಕೆ ಅಳವಡಿಸಿರುವ ಪರಿಕರಗಳು ಹಳೆಯದ್ದಾಗಿವೆ. ಅವುಗಳ ಬದಲಾವಣೆಗೂ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಯಶವಂತಪುರ ವಾರ್ಡ್

ಯಶವಂತಪುರ, ಗುರುಮೂರ್ತಿನಗರ, ಕಮಲಾ ನೆಹರು ಎಕ್ಸ್‌ಟೆನ್ಶನ್, ಜಿ.ಕೆ.ಕಾಲೊನಿ, ಎನ್‌.ಎನ್‌.ಕಾಲೊನಿ, ಡಾ.ಅಂಬೇಡ್ಕರ್ ನಗರ, ರೈಲ್ವೆ ವಸತಿ ಬಡಾವಣೆ, ಎಲ್‌ಐಸಿ ಕಾಲೊನಿ, ಬಿ.ಕೆ.ನಗರ ಈ ವಾರ್ಡ್‌ನ ಪ್ರಮುಖ ಪ್ರದೇಶಗಳು. ಒಳಚರಂಡಿ ನಿರ್ಮಾಣ, ಕುಡಿಯುವ ನೀರಿನ ಪೈಪ್ ಅಳವಡಿಕೆ, ವೈಟ್‌ ಟಾಪಿಂಗ್ ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಇದಕ್ಕಾಗಿ ರಸ್ತೆಗಳನ್ನು ಅಗೆದು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಇದರಿಂದ ದೂಳು ಸಮಸ್ಯೆ ಹೆಚ್ಚಾಗಿ ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಚೌಡೇಶ್ವರಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಿ.ಕೆ.ರಸ್ತೆ ಅಗೆದು ನಾಲ್ಕು ತಿಂಗಳಾಗಿದೆ. ದೂಳಿನ ಸಮಸ್ಯೆ ಹೆಚ್ಚಾಗಿರುವ ಕಾರಣ ನಿವಾಸಿಗಳು ಮುಖಕ್ಕೆ ಗವುಸು ಹಾಕಿಕೊಂಡು ಓಡಾಡಬೇಕಾದ ಸ್ಥಿತಿ ಇದೆ.

ನಿರಾಶ್ರಿತರು ಹಾಗೂ ಬಡವರ ವಸತಿಗಾಗಿ ಬಿ.ಕೆ.ರಸ್ತೆಯಲ್ಲಿ ಮನೆಗಳ ಸಮುಚ್ಚಯ ನಿರ್ಮಿಸಲಾಗಿದೆ. 210 ಮನೆಗಳು ಹಂಚಿಕೆಗೆ ಸಿದ್ಧವಾಗಿವೆ. ಫುಟ್‌ಪಾತ್‌ ಒತ್ತುವರಿ, ಖಾಲಿ ನಿವೇಶನಗಳಲ್ಲಿ ಕಸ ಹಾಗೂ ಬೀದಿ ನಾಯಿಗಳ ಹಾವಳಿ ಸಮಸ್ಯೆಗಳೂ ವಾರ್ಡ್‌ನಲ್ಲಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಎಚ್‌ಎಂಟಿ ವಾರ್ಡ್

ಮುನೇಶ್ವರನಗರ, ಯಶವಂತಪುರ ಕೈಗಾರಿಕಾ ಪ್ರದೇಶ, ಪ್ಲಾಟಿನಂ ಸಿಟಿ, ನೇತಾಜಿ ನಗರ, ಪೀಣ್ಯ, ಪೀಣ್ಯ ಕೈಗಾರಿಕಾ ಪ್ರದೇಶ 2ನೇ ಹಂತ, ಸಿಎಂಟಿಐ ಕ್ವಾರ್ಟರ್ಸ್, ಸಿವಿಲ್ ಎಂಜಿನಿಯರ್ಸ್ ಕ್ವಾರ್ಟರ್ಸ್ ಹಾಗೂ ಗೊರಗುಂಟೆಪಾಳ್ಯ ಈ ವಾರ್ಡ್‌ನಲ್ಲಿವೆ. ದಿನದ 24 ಗಂಟೆಯೂ ವಾಣಿಜ್ಯ ಚಟುವಟಿಕೆಗಳು ನಡೆಯುವ ವಾರ್ಡ್‌ ಇದಾಗಿದೆ. ನಿತ್ಯವೂ ವಾಹನಗಳ ದಟ್ಟಣೆ ಇದ್ದೇ ಇರುತ್ತದೆ. ಮೂಲಸೌಕರ್ಯಗಳ ಕೊರತೆಯೂ ಸಾಕಷ್ಟಿದೆ.

ಬೇರೆ ವಾರ್ಡ್‌ಕ್ಕಿಂತ ಜನಪ್ರತಿನಿಧಿಗಳ ಜಟಾಪಟಿ ಈ ವಾರ್ಡ್‌ನಲ್ಲೇ ಜಾಸ್ತಿಯೇ ಇದೆ. ವಾರ್ಡ್‌ನ ಹಲವು ರಸ್ತೆಗಳು ಹಾಳಾಗಿದ್ದು, ಅವುಗಳ ಅಭಿವೃದ್ಧಿ ಆರಂಭವಾಗಿಲ್ಲ. ಯಶವಂತಪುರ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳೆಲ್ಲವೂ ದೂಳುಮಯವಾಗಿದ್ದು, ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಪೀಣ್ಯದಲ್ಲಿ ಉದ್ಯಾನಗಳು ಅವ್ಯವಸ್ಥೆ ಆಗರವಾಗಿದ್ದು, ಬೀದಿ ನಾಯಿಗಳೂ ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.