ಶೈಕ್ಷಣಿಕ ಸಹಭಾಗಿತ್ವ ಕುರಿತ ಚರ್ಚೆಯಲ್ಲಿ ಬಿಸಿಯು ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ಕುಲಸಚಿವರಾದ ಟಿ.ಜವರೇಗೌಡ, ಪ್ರೊ. ಬಿ.ರಮೇಶ್, ಪೆರುಗ್ವೆ ರಾಯಭಾರಿ ಫ್ಲೆಮಿಂಗ್ ಡುವಾರ್ಟೆ, ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಕಾಂಬೋಡಿಯಾದ ಕಾನ್ಸುಲ್ ಕಾರ್ತಿಕ್ ತಲ್ಲಂ, ನಿಯೋಗದ ಸದಸ್ಯ ನವಾಬ್ ನಜಾಫ್ ಆಲಿ ಖಾನ್ ಭಾಗವಹಿಸಿದ್ದರು
ಬೆಂಗಳೂರು: ಭಾರತದಲ್ಲಿರುವ ಪೆರುಗ್ವೆ ರಾಯಭಾರಿ ಫ್ಲೆಮಿಂಗ್ ಡುವಾರ್ಟೆ ಹಾಗೂ ಕಾಂಬೋಡಿಯಾದ ಕಾನ್ಸುಲ್ ಕಾರ್ತಿಕ್ ತಲ್ಲಂ ನೇತೃತ್ವದ ನಿಯೋಗ ಶುಕ್ರವಾರ ಬೆಂಗಳೂರು ನಗರ ವಿಶ್ವವಿದ್ಯಾಲಯದ (ಬಿಸಿಯು) ಜ್ಞಾನಜ್ಯೋತಿ ಕ್ಯಾಂಪಸ್‌ಗೆ ಭೇಟಿ ನೀಡಿತು.
ಬಿಸಿಯು ಸಿಂಡಿಕೇಟ್ ಸದಸ್ಯ ಬಿ.ಆರ್.ಸುಪ್ರೀತ್ ಅವರ ಆಹ್ವಾನದ ಮೇರೆಗೆ ಭೇಟಿ ನೀಡಿದ ಪೆರುಗ್ವೆ–ಕಾಂಬೋಡಿಯಾ ನಿಯೋಗ, ಶೈಕ್ಷಣಿಕ ಸಹಭಾಗಿತ್ವ ಕುರಿತು ಬಿಸಿಯು ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಹಾಗೂ ಹಿರಿಯ ಪ್ರಾಧ್ಯಾಪಕರು ಹಾಗೂ ಆಡಳಿತ ವರ್ಗದೊಂದಿಗೆ ಚರ್ಚೆ ನಡೆಸಿತು. ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗದ ಅವಕಾಶಗಳ ಕುರಿತು ಪರಾಮರ್ಶಿಸಿತು.
ಲಿಂಗರಾಜ ಗಾಂಧಿ ಅವರು, ‘ಪ್ರಸ್ತುತ ವಿಶ್ವವಿದ್ಯಾಲಯವು ಹೊಸ ಪೀಳಿಗೆಯ ಅಗತ್ಯಗಳಿಗೆ ಅನುಗುಣವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ ಮತ್ತು ಆಡಳಿತ ಹಾಗೂ ಮಾನವಿಕ ಶಾಸ್ತ್ರ ವಿಭಾಗಗಳಲ್ಲಿ ನೂತನ ಕೋರ್ಸ್‌ಗಳನ್ನು ಆರಂಭಿಸಿದೆ. 12 ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಹೊಂದಿದೆ’ ಎಂದು ವಿವರಿಸಿದರು.
ಬಿಸಿಯು ಜೊತೆ ಶೈಕ್ಷಣಿಕ ಸಹಭಾಗಿತ್ವ ಕುರಿತು ಆಸಕ್ತಿ ವ್ಯಕ್ತಪಡಿಸಿದ ಫ್ಲೆಮಿಂಗ್ ಡುವಾರ್ಟೆ, ‘ಶೀಘ್ರದಲ್ಲೇ ಶಿಕ್ಷಣ ಸಚಿವರ ನೇತೃತ್ವದ ನಿಯೋಗ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದೆ. ಆಗ ಒಡಂಬಡಿಕೆ ಮಾಡಿಕೊಳ್ಳುತ್ತೇವೆ. ಶೈಕ್ಷಣಿಕ ವಿನಿಯಮ ಕಾರ್ಯಕ್ರಮವನ್ನೂ ರೂಪಿಸುತ್ತೇವೆ’ ಎಂದು ಪ್ರಕಟಿಸಿದರು.
ಸಿಂಡಿಕೇಟ್ ಸದಸ್ಯರಾದ ಪ್ರೊ.ಲಕ್ಷ್ಮಿನಾರಾಯಣ, ಜಾಗತಿಕ ಭಾಷೆಗಳ ಕೇಂದ್ರದ ಅಧ್ಯಕ್ಷೆ ಪ್ರೊ. ಜ್ಯೋತಿ ವೆಂಕಟೇಶ್ ಹಾಗೂ ವಿವಿಧ ನಿಕಾಯಗಳ ಡೀನ್ ಮತ್ತು ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.