ADVERTISEMENT

ಪಿಇಎಸ್‌ ವಿ.ವಿ ಘಟಿಕೋತ್ಸವ: 17 ಮಂದಿಗೆ ಚಿನ್ನ

ಪಿಇಎಸ್‌ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:49 IST
Last Updated 29 ಆಗಸ್ಟ್ 2019, 19:49 IST
ದೊರೆಸ್ವಾಮಿ
ದೊರೆಸ್ವಾಮಿ   

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಶನಿವಾರ ನಡೆಯಲಿದ್ದು, ಈ ಬಾರಿ ಒಟ್ಟು 1,517 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಅಧಿಕ ಅಂಕಗಳನ್ನು ಪಡೆದ 17 ಮಂದಿಗೆ ಚಿನ್ನದ ಪದಕ ಹಾಗೂ 92 ಮಂದಿಗೆ ಬೆಳ್ಳಿಪದಕ ನೀಡಿ ಪುರಸ್ಕರಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ತಿಳಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಅನಿಲ್‌ ಸಹಸ್ರಬುದ್ಧೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಪಲ್ಲವಿ ಕಾರಂತ್‌ ಅವರು ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪಡೆದ (ಕಂಪ್ಯೂಟರ್‌ ಸೈನ್ಸ್‌ ವಿಭಾಗ) ಮೊದಲಿಗರು. ಇಸ್ರೊ ಉದ್ಯೋಗಿ ಎ.ಎಸ್‌.ಮಧು ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಎಂ.ಟೆಕ್‌ ಪಡೆದಿದ್ದಾರೆ ಎಂದರು.

ವಿದ್ಯಾರ್ಥಿ ವೇತನ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರವಾಗಲಿದೆ. 2019ರ ಮಾರ್ಚ್‌ನಲ್ಲಿ 5038 ವಿದ್ಯಾರ್ಥಿಗಳಿಗೆ ₹3.54 ಕೋಟಿ ವಿದ್ಯಾರ್ಥಿವೇತನ ನೀಡಲಾಗಿದೆ. 2014–15ರಿಂದ ಇಲ್ಲಿಯವರೆಗೆ 26,570 ವಿದ್ಯಾರ್ಥಿಗಳಿಗೆ ₹21.23 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಪ್ರತಿ ವಿಭಾಗದಲ್ಲಿ ಮೊದಲಸ್ಥಾನ ಪಡೆದವರಿಗೆ ‘ಪ್ರೊ.ಸಿ.ಎನ್‌.ಆರ್‌.ರಾವ್‌ ಪ್ರತಿಭಾ ಪುರಸ್ಕಾರ’ ಹಾಗೂ ಪ್ರತಿ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಐವರಿಗೆ ‘ಪ್ರೊ.ಎಂಆರ್‌ಡಿ ಪ್ರತಿಭಾ ಪುರಸ್ಕಾರ’ ನೀಡಲಾಗುತ್ತದೆ ಎಂದರು.

ಒಪ್ಪಂದ: ವಿವಿಧ ದೇಶಗಳ ಪ್ರತಿಷ್ಠಿತ 14 ವಿಶ್ವವಿದ್ಯಾಲಯಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಎರಡು ಸೆಮಿಸ್ಟರ್‌ ಹಾಗೂ ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಎರಡು ಸೆಮಿಸ್ಟರ್‌ ವ್ಯಾಸಂಗ ಮಾಡುವ ಸೌಲಭ್ಯವಿದೆ ಎಂದು ತಿಳಿಸಿದರು.

ಉದ್ಯೋಗ: 2019ರಲ್ಲಿ ಎಂಜಿನಿಯರಿಂಗ್‌ನಲ್ಲಿ 643 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದ್ದು, ವಾರ್ಷಿಕ ₹46.6 ಲಕ್ಷ ಸಂಬಳ ನಿಗದಿಪಡಿಸಿ ಆಸ್ಟ್ರೇಲಿಯಾ ಮೂಲದ ಕಂಪನಿ ಒಬ್ಬರಿಗೆ ಉದ್ಯೋಗ ನೀಡಿದೆ. 232 ಮಂದಿ ವಾರ್ಷಿಕ ₹ 6 ಲಕ್ಷಕ್ಕೂ ಅಧಿಕ ಸಂಬಳ ಸಿಗುತ್ತಿದೆ. ಮ್ಯಾನೇಜ್‌ಮೆಂಟ್‌ನಲ್ಲಿ 170, ವಾಣಿಜ್ಯದಲ್ಲಿ 297, ಫಾರ್ಮಸಿ ವಿಭಾಗದಲ್ಲಿ 93 ಮಂದಿ ಕ್ಯಾಂಪಸ್‌ ಸಂದರ್ಶನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.

ಪಿಇಎಸ್‌ನಿಂದ ವೈದ್ಯಕೀಯ ಕಾಲೇಜು
ಪಿಇಎಸ್‌ ವಿಶ್ವವಿದ್ಯಾಲಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿನ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೆ.18ರಂದು ಗುದ್ದಲಿಪೂಜೆ ನೆರವೇರಿಸಲಿದ್ದಾರೆ.

ಅಂದಾಜು ವೆಚ್ಚ ₹400 ಕೋಟಿ. 500 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆ ಒಂದು ವರ್ಷದಲ್ಲಿ ಶುರುವಾಗಲಿದೆ. 2021–22ನೇ ಸಾಲಿನಿಂದ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ದೊರೆಸ್ವಾಮಿ ತಿಳಿಸಿದರು.

ಹೊಸ ಕೋರ್ಸ್‌: ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಸಾಧಕರು, ಆಧ್ಯಾತ್ಮಿಕ ಕ್ಷೇತ್ರಗಳ ಸಾಧಕ– ನಾಯಕರ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಮೌಲ್ಯಾಧಾರಿತ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ ಎಂದರು.

ಉಪಗ್ರಹ ಉಡಾವಣೆಗೆ ಪಿಇಎಸ್‌ ಸಜ್ಜು
ಕರಾವಳಿ ಭಾಗದಲ್ಲಿ ಸಮಾಜಘಾತುಕ ಹಾಗೂ ಉಗ್ರರ ಚಟುವಟಿಕೆಗಳ ಮೇಲೆ ನಿಗಾ ಇಡಲು ಪಿಇಎಸ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಉಪಗ್ರಹ (ಪೈಸ್ಯಾಟ್‌–2) ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರ ಉಡಾವಣೆಯಾಗಲಿದೆ.

ಡಿಆರ್‌ಡಿಒ ಇದಕ್ಕಾಗಿ ₹ 2.3 ಕೋಟಿ ಆರ್ಥಿಕ ನೆರವು ನೀಡಿದೆ. ಮೂರು ವರ್ಷಗಳಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಡಿಆರ್‌ಡಿಒ ಜೊತೆಗೆ ಚರ್ಚಿಸಿ ಉಡಾವಣೆ ದಿನಾಂಕ ನಿರ್ಧರಿಸಲಿದ್ದೇವೆ ಎಂದು ದೊರೆಸ್ವಾಮಿ ತಿಳಿಸಿದರು. 150 ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದು, ಪ್ರಾಧ್ಯಾಪಕರು, ಸಂಶೋಧಕರು ನೆರವು ನೀಡುತ್ತಿದ್ದಾರೆ. ಇದು ರಕ್ಷಣೆಗೆ ಸಂಬಂಧಿಸಿದ ಉಪಗ್ರಹ, ಹೀಗಾಗಿ ಹೆಚ್ಚಿನ ವಿವರಗಳನ್ನು ನೀಡಲಾಗದು ಎಂದು ಕುಲಪತಿ ಡಾ.ಕೆ.ಎನ್‌.ಬಿ.ಮೂರ್ತಿ ತಿಳಿಸಿದರು.

*
ಔಟ್‌ಲುಕ್‌ ನಡೆಸಿದ ಸಮೀಕ್ಷೆಯಲ್ಲಿ ಪಿಇಎಸ್‌ ಖಾಸಗಿ ವಿಶ್ವವಿದ್ಯಾಲಯ ದೇಶದಲ್ಲಿ 6ನೇ ಸ್ಥಾನ ಪಡೆದಿದೆ. ಉನ್ನತ ಶಿಕ್ಷಣ ಪರಿಷತ್‌ ಪ್ರಕಾರ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.
-ಪ್ರೊ.ಎಂ.ಆರ್‌.ದೊರೆಸ್ವಾಮಿ ಕುಲಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.