ADVERTISEMENT

ಪಿಇಎಸ್: ವಿಜ್ಞಾನ ಮೇಳ ನಾಳೆಯಿಂದ

100 ಸರ್ಕಾರಿ ಶಾಲೆಗಳ 2,400 ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:06 IST
Last Updated 7 ಡಿಸೆಂಬರ್ 2022, 16:06 IST
ವಿಜ್ಞಾನ ಮೇಳದ ಆಮಂತ್ರಣ ಪತ್ರಿಕೆಯನ್ನು ಪ್ರೊ.ಎಂ.ಆರ್. ದೊರೆಸ್ವಾಮಿ ಅನಾವರಣ ಮಾಡಿದರು. ವಿಶ್ವವಿದ್ಯಾಲಯದ ಕುಲಪತಿ ಜೆ. ಸೂರ್ಯಪ್ರಸಾದ್ ಹಾಗೂ ರಿಜಿಸ್ಟ್ರಾರ್ ಕೆ.ಎಸ್. ಶ್ರೀಧರ್ ಇದ್ದಾರೆ.
ವಿಜ್ಞಾನ ಮೇಳದ ಆಮಂತ್ರಣ ಪತ್ರಿಕೆಯನ್ನು ಪ್ರೊ.ಎಂ.ಆರ್. ದೊರೆಸ್ವಾಮಿ ಅನಾವರಣ ಮಾಡಿದರು. ವಿಶ್ವವಿದ್ಯಾಲಯದ ಕುಲಪತಿ ಜೆ. ಸೂರ್ಯಪ್ರಸಾದ್ ಹಾಗೂ ರಿಜಿಸ್ಟ್ರಾರ್ ಕೆ.ಎಸ್. ಶ್ರೀಧರ್ ಇದ್ದಾರೆ.   

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಇದೇ ಶುಕ್ರವಾರದಿಂದ ಭಾನುವಾರದವರೆಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ‘ವಿಜ್ಞಾನ ಮೇಳ’ ಹಮ್ಮಿಕೊಂಡಿದೆ.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರೂ ಆಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್. ದೊರೆಸ್ವಾಮಿ, ‘ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಟ್ಟಡದಲ್ಲಿ ನಡೆಯುವ ಈ ವಿಜ್ಞಾನ ಮೇಳದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ 100 ಸರ್ಕಾರಿ ಶಾಲೆಗಳ 2,400 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 7,8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ವಿಜ್ಞಾನಿ ಸಿ.ಎನ್‌.ಆರ್‌. ರಾವ್ ಅವರು ಮೇಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಚ್.ಆರ್. ನಾಗೇಂದ್ರ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಜಾಗೃತಗೊಳಿಸುವುದು ಮೇಳದ ಮುಖ್ಯ ಉದ್ದೇಶ. ಸಾಕ್ಷಾಧಾರಿತ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳ ಪ್ರೇರಣೆಗೆ ಈ ಮೇಳ ಸಹಕಾರಿಯಾಗಲಿದೆ. ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಪ್ರದರ್ಶಿಸಲಾಗುತ್ತದೆ. ರಸಪ್ರಶ್ನೆ ಹಾಗೂ ಯೋಗ–ಧ್ಯಾನದ ಕಾರ್ಯಕ್ರಮವೂ ನಡೆಯಲಿದೆ. ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ, ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಮೂರು ದಿನಗಳೂ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೇಳ ನಡೆಯಲಿದೆ.ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುವುದು. ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯಗಳಿಲ್ಲ. ಆದ್ದರಿಂದ, ಖಾಸಗಿ ಸೇರಿ ಎಲ್ಲ ವಿಶ್ವವಿದ್ಯಾಲಯಗಳು ಈ ರೀತಿಯ ವಿಜ್ಞಾನ ಮೇಳಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಲಿದೆ. ವಿಶ್ವವಿದ್ಯಾಲಯಗಳ ಬಗ್ಗೆ ಮಕ್ಕಳಿಗೆ ಸ್ಪಷ್ಟ ಪರಿಕಲ್ಪನೆ ಬರಲಿದೆ’ ಎಂದು ವಿವರಿಸಿದರು.

‘ಶಾಲೆಯ ಅಭಿವೃದ್ಧಿ ಪೂರ್ಣಗೊಳಿಸಿ’

‘ಸರ್ಕಾರಿ ಶಾಲೆಗಳನ್ನು ಶಾಸಕರು ದತ್ತು ಪಡೆದು, ಅಭಿವೃದ್ಧಿಪಡಿಸುವ ಯೋಜನೆಯನ್ನು 2020–21ರಲ್ಲಿ ಜಾರಿಗೊಳಿಸಲಾಗಿದೆ. ತಲಾ ಮೂರು ಶಾಲೆಗಳನ್ನು ಅಭಿವೃದ್ಧಿಪಡಿಸುವಂತೆ ಎಲ್ಲ ಶಾಸಕರಿಗೆ ದತ್ತು ಸ್ವೀಕಾರ ಪತ್ರಗಳನ್ನು ನೀಡಲಾಗಿದೆ. ಎರಡು ವರ್ಷಗಳಾದರೂ ಕೆಲ ಶಾಸಕರು ತಾವು ದತ್ತು ಪಡೆದ ಶಾಲೆಗಳನ್ನು ಇನ್ನೂ ಅಭಿವೃದ್ಧಿಪಡಿಸಿ, ಹಸ್ತಾಂತರಿಸಲಿಲ್ಲ. ಮೂರು ಶಾಲೆಗಳನ್ನು ಅಭಿವೃದ್ಧಿಪಡಿಸದವರು ತಮ್ಮ ಕ್ಷೇತ್ರಕ್ಕೆ ಇನ್ನೇನು ಮಾಡುತ್ತಾರೆ’ ಎಂದು ಪ್ರೊ.ಎಂ.ಆರ್. ದೊರೆಸ್ವಾಮಿ ಪ್ರಶ್ನಿಸಿದರು.

‘ಸುಸಜ್ಜಿತಕಾಂಪೌಂಡ್ ಇಲ್ಲದ, ಸೋರುತ್ತಿರುವ ಶಾಲೆಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಇಷ್ಟಪಡುವುದಿಲ್ಲ. ಬಡ ಮಕ್ಕಳ ಹಿತದೃಷ್ಟಿಯಿಂದ ಶಾಸಕರು ತಮ್ಮ ಅವಧಿ ಮುಗಿಯುವ ಒಳಗೆ ಶಾಲೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಬೇಕು. ಶಾಲೆಗಳಲ್ಲಿನ ದೈಹಿಕ ಶಿಕ್ಷಕರಿಗೆ ಯೋಗದ ಬಗ್ಗೆ ತರಬೇತಿ ನೀಡಿ, ಮಕ್ಕಳಿಗೆ ಯೋಗ ಕಲಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.