ADVERTISEMENT

ಪಿಜಿ: ಆಸ್ತಿ ತೆರಿಗೆ ಪರಿಶೀಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 21:30 IST
Last Updated 17 ಸೆಪ್ಟೆಂಬರ್ 2025, 21:30 IST
ತೆರಿಗೆ
ತೆರಿಗೆ   

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ನ (ಪಿಜಿ) ಎಲ್ಲ ಕಟ್ಟಡಗಳನ್ನು ಪಟ್ಟಿ ಮಾಡಲಿ, ಬೆಸ್ಕಾಂ ಸಂಪರ್ಕದ ಮಾಹಿತಿ, ಅಳತೆಯನುಸಾರ ಆಸ್ತಿ ತೆರಿಗೆಯನ್ನು ಪರಿಶೀಲಿಸಬೇಕು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ (ಬಿಎಸ್‌ಸಿಸಿ) ಆಯುಕ್ತ  ಕೆ.ಎನ್‌. ರಮೇಶ್‌ ಸೂಚಿಸಿದರು.

ಎಸ್‌ಎಎಸ್‌ ಘೋಷಣೆಗಳನ್ನು ಪರಿಶೀಲಿಸಿ ತಪ್ಪಾಗಿರುವ ಪ್ರಕರಣಗಳಿಗೆ ಕಾಯ್ದೆ ಹಾಗೂ ನಿಯಮಗಳಂತೆ ಆಸ್ತಿತೆರಿಗೆ ಪರಿಷ್ಕರಿಸಲು ಹೇಳಿದರು.

ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆದಿರುವ ಕಟ್ಟಡಗಳ ಮಾಹಿತಿಯನ್ನು ನಗರ ಯೋಜನೆ ವಿಭಾಗದಿಂದ ಪಡೆದು, ಅವುಗಳನ್ನೆಲ್ಲ ಆಸ್ತಿ ತೆರಿಗೆ ಜಾಲಕ್ಕೆ ತರಬೇಕು. ಬಹುಮಹಡಿ ಕಟ್ಟಡಗಳ ಪಟ್ಟಿ ಮಾಡಿ, ‘ಟೋಟಲ್‌ ಸ್ಟೇಷನ್‌ ಸರ್ವೆ’ ಮೂಲಕ ವೈಜ್ಞಾನಿಕವಾಗಿ ಕಟ್ಟಡದ ಅಳತೆಯನ್ನು ಮಾಡಿ ವ್ಯತ್ಯಾಸ ಕಂಡುಬಂದ ಪ್ರಕರಣಗಳಲ್ಲಿ ಆಸ್ತಿತೆರಿಗೆ ಪರಿಷ್ಕರಿಸಲು ಸೂಚಿಸಿದರು.

ADVERTISEMENT

ಗುಂಡಿಮುಕ್ತ ರಸ್ತೆ: ಪೂರ್ವ ನಗರ ಪಾಲಿಕೆ (ಬಿಇಸಿಸಿ) ವ್ಯಾಪ್ತಿಯ ರಸ್ತೆಗಳನ್ನು ಗುಂಡಿಮುಕ್ತವಾಗಿಸಲು ವಾರ್ಡ್‌ ಮಟ್ಟದ ಎಲ್ಲ ಎಂಜಿನಿಯರ್‌ಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಆಯುಕ್ತ ಡಿ.ಎಸ್. ರಮೇಶ್ ಹೇಳಿದರು.

ದೊಡ್ಡನೆಕ್ಕುಂದಿ ವ್ಯಾಪ್ತಿಯ ಎಇಸಿಎಸ್ ಬಡಾವಣೆಯಲ್ಲಿ ರಸ್ತೆ ಗುಂಡಿ ಮುಚ್ಚುವುದನ್ನು ಅವರು ಬುಧವಾರ ಪರಿಶೀಲಿಸಿದರು.

ಅಮಾನತು ಎಚ್ಚರಿಕೆ: ಸಿ.ವಿ. ರಾಮನ್‌ನಗರದಲ್ಲಿ ಹಾಳಾದ ಪಾದಚಾರಿ ರಸ್ತೆಗಳು, ರಸ್ತೆ ಗುಂಡಿಗಳ ದುರಸ್ತಿ ಮಾಡದಿರುವುದು, ಕಸ ಗುಡಿಸದಿರುವುದು, ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗದಿರುವುದನ್ನು ಗಮನಿಸಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್‌ ಅವರು, ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಸಿದರು.

ಜೀವನ್ ಬಿಮಾ ನಗರ ಮುಖ್ಯರಸ್ತೆ ಬದಿ ಖಾಲಿ ನಿವೇಶನವಿದೆ. ಈ ಸ್ಥಳದಲ್ಲಿ ತ್ಯಾಜ್ಯ ತುಂಬಿದ್ದು, ಖಾಲಿ ನಿವೇಶನದಾರರಿಗೆ ನೋಟಿಸ್ ನೀಡಬೇಕು. ಪಾದಚಾರಿ ಮಾರ್ಗ ಹಾಗೂ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿದವರಿಗೆ ದಂಡ ವಿಧಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.