ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಫೋನ್‌ಪೆ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಂ ಅವರು ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.
ಇದೇ ಜುಲೈ 17ರಂದು ಪೋಸ್ಟ್ ಮಾಡಿದ್ದ ಸಮೀರ್, ‘ನನಗೀಗ 46 ವರ್ಷ. ಕಳೆದ 15 ವರ್ಷಗಳಿಂದ ನಾನು ಕರ್ನಾಟಕದಲ್ಲಿ ಇರಲೇ ಇಲ್ಲ. ನನ್ನ ಅಪ್ಪ ನೌಕಾಪಡೆಯಲ್ಲಿದ್ದರು. ದೇಶದ ಎಲ್ಲೆಡೆ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕೆಲಸ ಮಾಡಲು ಅವರ ಮಕ್ಕಳಿಗೆ ಅವಕಾಶ ಇರಬಾರದೇ? ನಾನು ಕಂಪನಿಗಳನ್ನು ನಿರ್ಮಿಸಿದ್ದೇನೆ. 25 ಸಾವಿರಕ್ಕಿಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ಕರ್ನಾಟಕದಲ್ಲಿ ಕೆಲಸ ಮಾಡುವ ಅವಕಾಶ ನನ್ನ ಮಕ್ಕಳಿಗೆ ಇರಬಾರದೇ? ನಾಚಿಕೆಯಾಗಬೇಕು’ ಎಂದಿದ್ದರು.
ಅವರ ಈ ಪೋಸ್ಟ್‌ಗೆ ಆಕ್ಷೇಪ ವ್ಯಕ್ತವಾದಾಗ, ‘ಕರ್ನಾಟಕ ಅಂದರೆ ಕನ್ನಡಿಗರು ಮಾತ್ರವೇ?’ ಎಂದು ಪ್ರಶ್ನಿಸಿದ್ದರು. ಅವರ ಈ ಪ್ರತಿಕ್ರಿಯಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕನ್ನಡಿಗರು ಫೋನ್‌ಪೆ ಬಳಸುವುದನ್ನು ನಿಲ್ಲಸಿ ಎಂಬ ಅಭಿಯಾನವನ್ನು ನಡೆಸಲಾಗಿತ್ತು. ಇದರ ಬೆನ್ನಲ್ಲೇ ಸಮೀರ್ ಅವರು ಕ್ಷಮೆಯಾಚಿಸಿ, ಸ್ಪಷ್ಟನೆ ನೀಡಿದ್ದಾರೆ.
‘ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ಕರ್ನಾಟಕ, ಕನ್ನಡಿಗರನ್ನು ಅವಮಾನಿಸಲು ಹಾಗೆ ಹೇಳಿರಲಿಲ್ಲ. ಒಂದೊಮ್ಮೆ ನನ್ನ ಮಾತಿನಿಂದ ಬೇಸರವಾಗಿದ್ದರೆ ಬೇಷರತ್ ಕ್ಷಮೆ ಕೇಳುತ್ತೇನೆ’ ಎಂದು ಸಮೀರ್ ನಿಗಂ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನು ಫೋನ್‌ಪೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಸಮೀರ್ ಸಹ ಆ ಪ್ರಕಟಣೆಯನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.