ಬೆಂಗಳೂರು: ‘ಆಧುನಿಕ ಯುಗದಲ್ಲಿ ಡಿಜಿಟಲ್ ತಂತ್ರಜ್ಞಾನವು ಫೋಟೋಗ್ರಫಿಯನ್ನು ಸುಲಭಗೊಳಿಸಿದೆ’ ಎಂದು ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದ ನಿರ್ದೇಶಕ ಕೆ.ಎನ್. ಶಾಂತಕುಮಾರ್ ಹೇಳಿದರು.
‘ಬೆಂಗಳೂರು ಫೋಟೋ ಜರ್ನಲಿಸ್ಟ್‌ಗಳ ಸಂಘ’ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಫೋಟೋಗ್ರಫಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಹಿಂದೆ ಛಾಯಾಚಿತ್ರವನ್ನು ಸೆರೆಹಿಡಿಯುವುದರಿಂದ ಹಿಡಿದು, ಅದನ್ನು ಅಭಿವೃದ್ಧಿಪಡಿಸುವುದು ಮತ್ತು ಮುದ್ರಿಸುವವರೆಗೆ ಹೆಚ್ಚು ಸಮಯ ಹಾಗೂ ಶ್ರಮ ಬೇಕಾಗುತ್ತಿತ್ತು. ಆಧುನಿಕ ಯುಗವು ಫೋಟೋಗ್ರಫಿಯನ್ನು ಸುಲಭಗೊಳಿಸಿದೆ. ಛಾಯಾಗ್ರಾಹಕರು ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಲು ಹೆಚ್ಚಿನ ಸಮಯಾವಕಾಶವೂ ದೊರೆಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.
‘ಪ್ರತಿಯೊಬ್ಬರ ಬಳಿ ಇರುವ ಮೊಬೈಲ್‌ನಲ್ಲಿ ಕ್ಯಾಮೆರಾ ಇದ್ದರೂ, ಎಲ್ಲರೂ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಒಬ್ಬ ಒಳ್ಳೆಯ ಛಾಯಾಗ್ರಾಹಕ ಬೆಳಕನ್ನು ಅರ್ಥಮಾಡಿಕೊಳ್ಳಬೇಕು. ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ತಿಳಿದುಕೊಳ್ಳಬೇಕು. ಜನರ ಕಥೆಗಳನ್ನು ಹೇಳುವಾಗ ನೈತಿಕತೆ, ಸಮಗ್ರತೆ, ಸತ್ಯ ಮತ್ತು ಸಹಾನುಭೂತಿಗೆ ಬದ್ಧರಾಗಿರಬೇಕು. ಛಾಯಾಗ್ರಹಣದಲ್ಲಿ ಸಮಯವು ನಿರ್ಣಾಯಕ’ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ‘ನೋಟಕ್ಕೆ ಹೃದಯವಂತಿಕೆಯ ಸ್ಪರ್ಶ ಸಿಕ್ಕಾಗ ಅದ್ಭುತ ಫೋಟೋ ಜರ್ನಲಿಸ್ಟ್ ಹುಟ್ಟುತ್ತಾನೆ. ಆತ ಆ ಕ್ಷಣದಲ್ಲಿ ತೆಗೆದ ಚಿತ್ರ ಚರಿತ್ರೆಯಾಗುತ್ತದೆ. ಮಗು ಮಾತನಾಡುವುದಕ್ಕಿಂತ ಮೊದಲು ನೋಟದಿಂದಲೇ ಜಗತ್ತನ್ನು ಗ್ರಹಿಸುತ್ತದೆ. ನೋಟಕ್ಕೆ ಭಾಷೆಯ, ಪದಗಳ, ವಾಕ್ಯಗಳ ಹಂಗಿಲ್ಲ’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಪತ್ರಕರ್ತ ಸದಾಶಿವ ಶೆಣೈ, ಸಂಘದ ಅಧ್ಯಕ್ಷ ಬಿ.ಎನ್. ಮೋಹನ್ ಕುಮಾರ್, ಛಾಯಾಗ್ರಾಹಕ ಭಾಗ್ಯ ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.