ADVERTISEMENT

ಪಿಂಕ್ ಆಟೊ ರಿಕ್ಷಾ: ಮಹಿಳೆಯರೇ ‘ಸಾರಥಿಗಳು’

ನಮ್ಮ ಸಾರಥಿ ಟ್ರಸ್ಟ್‌ ವತಿಯಿಂದ ಮಹಿಳೆಯರಿಗೆ ತರಬೇತಿ *ಸಾರಥಿ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 15:29 IST
Last Updated 23 ಸೆಪ್ಟೆಂಬರ್ 2025, 15:29 IST
ಮಹಿಳಾ ಚಾಲಕರು ಪಿಂಕ್ ಆಟೊ ರಿಕ್ಷಾ ಚಾಲನೆ ಮಾಡುವ ಮೂಲಕ ಸಾರಥಿ ಯೋಜನೆಗೆ ಚಾಲನೆ ನೀಡಿದರು
ಪ್ರಜಾವಾಣಿ ಚಿತ್ರ
ಮಹಿಳಾ ಚಾಲಕರು ಪಿಂಕ್ ಆಟೊ ರಿಕ್ಷಾ ಚಾಲನೆ ಮಾಡುವ ಮೂಲಕ ಸಾರಥಿ ಯೋಜನೆಗೆ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಟೊ ರಿಕ್ಷಾ ಚಾಲನೆಗೆ ಸಂಬಂಧಿಸಿದಂತೆ ನಮ್ಮ ಸಾರಥಿ ಟ್ರಸ್ಟ್‌ ಮಹಿಳೆಯರಿಗೆ ರೂಪಿಸಿರುವ ‘ಸಾರಥಿ’ ಯೋಜನೆಗೆ ನಗರದಲ್ಲಿ ಮಂಗಳವಾರ ಚಾಲನೆ ದೊರೆತಿದ್ದು, ಈಗಾಗಲೇ ತರಬೇತಿ ಪಡೆದ ಮಹಿಳೆಯರು ‘ಪಿಂಕ್ ಆಟೊ ರಿಕ್ಷಾ’ ಚಾಲನೆ ಮಾಡಿ ಸಂಭ್ರಮಿಸಿದರು. 

ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆ ಬಗ್ಗೆ ವಿವರಿಸಿದ ಟ್ರಸ್ಟ್‌ನ ಅಧ್ಯಕ್ಷ ಸಿ. ಸಂಪತ್, ‘ಮಹಿಳೆಯರ ಜತೆಗೆ ಲಿಂಗತ್ವ ಅಲ್ಪಸಂಖ್ಯಾತರೂ ಈ ಯೋಜನೆಯ ಭಾಗವಾಗಬಹುದು. ವೃತ್ತಿಪರ ಆಟೊ ರಿಕ್ಷಾ ಚಾಲಕರಾಗಲು ಅಗತ್ಯವಿರುವ ತರಬೇತಿ ಮತ್ತು ಬೆಂಬಲವನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತದೆ. ಚಾಲನಾ ಪರವಾನಗಿ ಪಡೆಯುವಲ್ಲಿಯೂ ನೆರವಾಗುತ್ತೇವೆ. ಮಾರ್ಚ್ 2026ರ ವೇಳೆಗೆ ಸಾವಿರ ಮಹಿಳಾ ಚಾಲಕರನ್ನು ತರಬೇತಿಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. 20230ರ ವೇಳೆಗೆ ಈ ಸಂಖ್ಯೆ 10 ಸಾವಿರಕ್ಕೆ ವಿಸ್ತರಿಸಲು ಯೋಜನೆ ರೂಪಿಸಿದ್ದೇವೆ’ ಎಂದು ಹೇಳಿದರು. 

‘ಈ ಯೋಜನೆಯ ಅನುಷ್ಠಾನದ ಭಾಗವಾಗಿ ಬೆಂಗಳೂರಿನಾದ್ಯಂತ ಐದು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಚಾಲನಾ ಕೌಶಲ, ಸಂಚಾರ ನಿಯಮಗಳು, ವಾಹನ ನಿರ್ವಹಣೆ, ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ, ಗ್ರಾಹಕ ಸೇವೆ ಮತ್ತು ಸುರಕ್ಷತೆಗಳನ್ನು ಒಳಗೊಂಡ ಮೂರು ತಿಂಗಳ ರಚನಾತ್ಮಕ ಕಾರ್ಯಕ್ರಮ ನಡೆಸುತ್ತೇವೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸಹಭಾಗಿತ್ವದಲ್ಲಿ ಚಾಲನಾ ಪರವಾನಗಿ ವಿತರಣೆ ಮತ್ತು ಹಣಕಾಸು ಸಂಸ್ಥೆಗಳಿಂದ ವಾಹನ ಸಾಲ ಪಡೆಯಲು ಸಹಾಯ ಮಾಡಲಾಗುತ್ತದೆ’ ಎಂದು ಹೇಳಿದರು. 

ADVERTISEMENT

ಬದಲಾವಣೆಗೆ ಸಹಕಾರಿ: ಟ್ರಸ್ಟ್‌ನ ಉಪಾಧ್ಯಕ್ಷ ರುದ್ರಮೂರ್ತಿ, ‘ಈ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಆಟೊ ರಿಕ್ಷಾ ಚಾಲನಾ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಟೊ ರಿಕ್ಷಾ ಚಾಲನಾ ತರಬೇತಿಗೆ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ನಗರದ ರಸ್ತೆಗೆ ಇಳಿಯುವ ಪಿಂಕ್ ಆಟೊ ರಿಕ್ಷಾಗಳು ಧೈರ್ಯ ಮತ್ತು ಬದಲಾವಣೆಯ ಕಥೆಗಳನ್ನು ಹೊತ್ತೊಯ್ಯಲಿವೆ’ ಎಂದರು. 

ಖಜಾಂಚಿ ದೇವಿಕಾ ರಾಜ್, ‘ನಮ್ಮ ಸಾರಥಿ ಮಹಿಳೆಯರಿಗೆ ತಿಂಗಳಿಗೆ ₹15 ಸಾವಿರದಿಂದ ₹ 25 ಸಾವಿರದವರೆಗೆ ಆದಾಯ ದೊರೆಯಲಿದೆ. ಸಾರ್ವಜನಿಕರಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಾರಿಗೆ ಆಯ್ಕೆಯನ್ನು ಈ ಯೋಜನೆ ಒದಗಿಸುತ್ತದೆ’ ಎಂದು ಹೇಳಿದರು.

ಈಗಾಗಲೇ ಆಟೊ ರಿಕ್ಷಾ ಚಾಲನೆ ಮಾಡುತ್ತಿರುವ ಐವರು ಮಹಿಳಾ ಚಾಲಕರು ಸಂತಸ ವ್ಯಕ್ತಪಡಿಸಿ, ‘ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನಾವು ಮೀಟರ್‌ ಪ್ರಕಾರ ದರ ಪಡೆಯುತ್ತಿರುವುದಕ್ಕೆ ಪ್ರಯಾಣಿಕರಿಗೂ ಖಷಿಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.