ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಎಂ.ಎಸ್. ರಾಮಯ್ಯ ವಿದ್ಯಾನಿಕೇತನದಲ್ಲಿ ‘ರಾಮಯ್ಯ ಖಗೋಳ ವೀಕ್ಷಣಾಲಯ’ ವನ್ನು ಆರಂಭಿಸಲಾಗಿದ್ದು, ಇತ್ತೀಚೆಗೆ ಅದನ್ನು ಉದ್ಘಾಟಿಸಲಾಯಿತು.
ಇದು ಐದು ಮೀಟರ್ ಎತ್ತರದ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಇದರಲ್ಲಿ 12-ಇಂಚಿನ ಪ್ರತಿಫಲಕ (ರಿಫ್ಲೆಕ್ಟರ್) ಟೆಲಿಸ್ಕೋಪ್ ಇದೆ.
ಇತ್ತೀಚೆಗೆ ನಡೆದ ಖಗೋಳ ವೀಕ್ಷಣಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಕುಲ ಶಿಕ್ಷಣ ಪ್ರತಿಷ್ಠಾನದ (ಜಿಇಎಫ್) ಮುಖ್ಯ ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ, ‘ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಬಗೆಗೆ ಅರಿವು ಮೂಡಿಸುತ್ತದೆ. ಮಾತ್ರವಲ್ಲ, ಖಗೋಳ ಕುರಿತು ಹೊಸ ವಿಚಾರಗಳನ್ನು ತಿಳಿಯುವ ಉತ್ಸಾಹವನ್ನು ಮೂಡಿಸುತ್ತದೆ’ ಎಂದು ತಿಳಿಸಿದರು.
ರಾಮಯ್ಯ ಖಗೋಳ ವೀಕ್ಷಣಾಲಯವು ಕೇವಲ ರಾಮಯ್ಯ ವಿದ್ಯಾನಿಕೇತನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರ ಶಿಕ್ಷಣ ಸಂಸ್ಥೆಗಳೊಂದಿಗೆ ಸಂವಹನ ಕಾರ್ಯಕ್ರಮಗಳು ಮತ್ತು ಸಹಯೋಗಗಳಿಗೆ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ ಎಂದು ಶಾಲೆಯ ಪ್ರಾಚಾರ್ಯೆ ಶಾಂತಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಇಎಫ್ ಅಧ್ಯಕ್ಷ ಡಾ. ಎಂ.ಆರ್. ಸೀತಾರಾಮ್, ಉಪಾಧ್ಯಕ್ಷ ಎಂ.ಆರ್. ಜಾನಕಿರಾಮ್, ಕಾರ್ಯದರ್ಶಿ ಎಂ.ಆರ್. ಆನಂದರಾಮ್, ಸಿಎಫ್ಒ ಜಿ ರಾಮಚಂದ್ರ ಮತ್ತು ಸಿಇಒ ಪಾರ್ಶ್ವನಾಥ್ ಎಚ್.ವಿ. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.