ADVERTISEMENT

ಬೆಂಗಳೂರು: ಇಸ್ಪೀಟ್‌ ಎಲೆಗಳಲ್ಲಿ ಮೈಕ್ರೊ ಕ್ಯಾಮೆರಾ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 20:22 IST
Last Updated 20 ಜೂನ್ 2020, 20:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಸ್ಪೀಟ್‌ ಎಲೆಗಳು ಮತ್ತಿತರ ವಸ್ತುಗಳಿಗೆ ಮೈಕ್ರೊ ಕ್ಯಾಮೆರಾ, ಸ್ಕ್ಯಾನರ್‌, ಗೋಪ್ಯ ಕ್ಯಾಮೆರಾಗಳಂತಹ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಅಳವಡಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಾದ ಇಮ್ರಾನ್‌ ಬಿನ್‌ ಇಸ್ಮಾಯಿಲ್‌ (29) ಯಶವಂತಪುರದ ಬಿ.ಕೆ. ನಗರದ ತನ್ನ ಮನೆಯಲ್ಲಿ ಎಲೆಕ್ಟ್ರಾನಿಕ್‌ ಉಪಕರಣ ಅಳವಡಿಸಿದ ವಸ್ತುಗಳನ್ನು ಸಂಗ್ರಹಿಸಿದ್ದ ಮಾಹಿತಿ ಆಧರಿಸಿ ಸಿಸಿಬಿ ವಿಶೇಷ ದಳದ ಅಧಿಕಾರಿಗಳು ದಾಳಿ ನಡೆಸಿದರು.

ಈತನಿಂದ ಇಸ್ಪೀಟ್‌ ಕಾರ್ಡ್‌ಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಮೊಬೈಲ್‌ಗಳು, ಕೀ ಚೈನ್‌, ರಿಮೋಟ್‌, ಕನ್ನಡಕ, ಶರ್ಟ್‌, ಪ್ಯಾಂಟ್‌, ಶೂ, ಕೈಗಡಿಯಾರ, ‍ಪರ್ಸ್‌, ರಿಸ್ಟ್‌ಬ್ಯಾಂಡ್‌, ನೋಟಿನ ಮದ್ಯ ಅರ್ಧಕ್ಕೆ ಚೌಕಕಾರವಾಗಿ ಕತ್ತರಿಸಿ ಮಧ್ಯದಲ್ಲಿ ಎಲೆಕ್ಟ್ರಾನಿಕ್‌ ಉಪಕರಣ ಅಳವಡಿಸಿರುವ ₹ 500 ಮುಖಬೆಲೆಯ ಆರು ನೋಟುಗಳ ಕಟ್ಟು, ₹ 100 ಮುಖಬೆಲೆಯ ಎರಡು ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಆರೋಪಿ ಮನೆಯಿಂದ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹ 4 ಲಕ್ಷ. ಈ ಉಪಕರಣಗಳನ್ನು ಬಳಸುವುದರಿಂದ ಇಸ್ಪೀಟ್‌ ಆಡುವ ಸಮಯದಲ್ಲಿ ಹುಕುಂ ಯಾವ ಕಾರ್ಡ್‌ನಲ್ಲಿರುತ್ತದೆ ಎಂಬ ಬಗ್ಗೆ ಉಪಕರಣ ಇಟ್ಟುಕೊಂಡ ವ್ಯಕ್ತಿಗೆ ಹೆಡ್‌ ಸ್ಪೀಕರ್‌ ಮೂಲಕ ಮಾಹಿತಿ ಸಿಗುತ್ತದೆ. ಇದರಿಂದ ಹಣ ಸುಲಭವಾಗಿ ಸಂಪಾದಿಸಬಹುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.