ADVERTISEMENT

ಸಿದ್ದರಾಮಯ್ಯರನ್ನು ಇಳಿಸಲು ಹುನ್ನಾರ: ಎನ್‌. ವೆಂಕಟೇಶ್‌ ಗೌಡ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 17:55 IST
Last Updated 3 ಜುಲೈ 2024, 17:55 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಸಾಮಾಜಿಕ ಕಳಕಳಿ ಇರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮಾಡುತ್ತಿರುವ ಹುನ್ನಾರ ಖಂಡನೀಯ ಎಂದು ಅಹಿಂದ ಚಳವಳಿ ರಾಜ್ಯ ಜಂಟಿ ಮುಖ್ಯ ಸಂಚಾಲಕ ಎನ್‌. ವೆಂಕಟೇಶ್‌ ಗೌಡ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಹಿಯ ಅನುಯಾಯಿಯಾಗಿ, ಸಮಾಜವಾದಿ ಸಿದ್ಧಾಂತದ ಚಿಂತನೆಗಳನ್ನು ಒಳಗೊಂಡಿರುವ ಸಿದ್ದರಾಮಯ್ಯ ಅವರು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಬದ್ಧತೆಯನ್ನು ಹೊಂದಿರುವ ರಾಜಕಾರಣಿ. ಪೆರಿಯಾರ್‌, ಕುವೆಂಪು ಅವರಂತೆ ಮೌಢ್ಯಗಳನ್ನು ವಿರೋಧಿಸುವ ಗುಣವಿದೆ. ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. 2013ರಿಂದ 18ರವರೆಗೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರು ತಂದ ‘ಭಾಗ್ಯ’ಗಳು ಬಡವರು ನೆಮ್ಮದಿಯಿಂದ ಬದುಕುವಂತೆ ಮಾಡಿವೆ. ಅಂಥ ಸಿದ್ದರಾಮಯ್ಯ ಅವರನ್ನು ಪದವಿ ಬಿಟ್ಟುಕೊಡಿ ಎಂದು ಕೇಳುತ್ತಿರುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ರಾಜ್ಯದಲ್ಲಿ ಲಿಂಗಾಯತರು ಶೇ 12 ಹಾಗೂ ಒಕ್ಕಲಿಗರು ಶೇ 10 ಇದ್ದಾರೆ. ಈ ಎರಡೇ ಸಮುದಾಯದವರು ಸ್ವಾತಂತ್ರ್ಯ ಬಂದಾಗಿನಿಂದ ಹೆಚ್ಚಿನ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಅವಕಾಶಗಳು ಬಹಳ ಕಡಿಮೆ ಸಿಕ್ಕಿವೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆ ಇರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಪ್ರಯತ್ನಿಸಿದರೆ ಅಹಿಂದ ಸಮಯದಾಯಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.