ADVERTISEMENT

ಹಿಂದುಳಿದ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿರುವ ಪ್ರಧಾನಿ: ದ್ವಾರಕಾನಾಥ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:14 IST
Last Updated 25 ಏಪ್ರಿಲ್ 2024, 15:14 IST
ಸಿ.ಎಸ್‌. ದ್ವಾರಕಾನಾಥ್
ಸಿ.ಎಸ್‌. ದ್ವಾರಕಾನಾಥ್   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹನ್ಸರಾಜ್ ಗಂಗಾರಾಮ್ ಅಹಿರ್‌ ಇಬ್ಬರೂ ಕೂಡಿ ಹಿಂದುಳಿದ ವರ್ಗಗಳನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಇಳಿದಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕಾನಾಥ್ ಆರೋಪಿಸಿದ್ದಾರೆ.

‘ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಬಿಸಿಗಳ ಪಟ್ಟಿಯಲ್ಲೇ ಮುಸ್ಲಿಮರಿಗೂ ಮೀಸಲಾತಿ ಕಲ್ಪಿಸುವ ಮೂಲಕ ಹಿಂದುಳಿದವರ ಮೀಸಲಾತಿಯನ್ನು ಕಡಿತಗೊಳಿಸಿತ್ತು. ಅದನ್ನು ದೇಶದಾದ್ಯಂತ ವಿಸ್ತರಿಸಲೂ ಯೋಚಿಸಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಚುನಾವಣಾ ಭಾಷಣ ಮಾಡಿದ್ದಾರೆ.  ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮೋದಿ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ. ಇಬ್ಬರಿಗೂ ಕರ್ನಾಟಕದ ಹಿಂದುಳಿದ ವರ್ಗಗಳ ಮೀಸಲಾತಿಯ ಅರಿವಿಲ್ಲ ಎಂದು ದ್ವಾರಕಾನಾಥ್ ಟೀಕಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದ ನಾಲ್ವಡಿ ಕೃಷ್ಣರಾಜ ಒಡೆಯರ್ ನೇಮಿಸಿದ ‘ಮಿಲ್ಲರ್ ಆಯೋಗ’ದಿಂದ ಹಿಡಿದು ಸ್ವಾತಂತ್ರ್ಯಾನಂತರದ ಚಿನ್ನಪ್ಪರೆಡ್ಡಿ ಆಯೋಗ, ವೆಂಕಟಸ್ವಾಮಿ ಆಯೋಗದ ಆದಿಯಾಗಿ ಇಂದಿನ ಎಲ್ಲ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗಗಳು ಎಂದೇ ಕರ್ನಾಟಕದಲ್ಲಿ ಗುರುತಿಸಿವೆ. ಮುಸ್ಲಿಮರನ್ನೆಂದೂ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಗುರುತಿಸಿಲ್ಲ, ಅಂತೆಯೇ ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಕೂಡ ಹಿಂದುಳಿದ ವರ್ಗಗಳ ಪಟ್ಟಿಯಲ್ಲೇ ಇದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ದೇವರಾಜ ಅರಸರು ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದರು. ನಂತರ ವೀರಪ್ಪ ವೀರಪ್ಪ ಮೊಯಿಲಿಯವರು ಮುಸ್ಲಿಂ ಸಮುದಾಯಕ್ಕೆ ಶೇ 4ರಷ್ಟು ಮೀಸಲಾತಿ ನೀಡಿದರು. ತಾವು ಮಾಡಿದ್ದೆಂದು ದೇವೇಗೌಡರು ಹೇಳುತ್ತಿರುವುದು ಕೂಡಾ ಸುಳ್ಳು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.