ಬೆಂಗಳೂರು: ಪೀಣ್ಯದಲ್ಲಿರುವ ಇಸ್ರೊ ಟೆಲೆಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ (ಐಎಸ್ಟಿಆರ್ಎಸಿ) ಕೇಂದ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ (ಆಗಸ್ಟ್ 26) ಭೇಟಿ ನೀಡಿದರು.
ಪ್ರಧಾನಿ ಅವರು ವಿಶೇಷ ವಿಮಾನದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆಗಮಿಸಿದರು.
ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಚಂದ್ರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದ ಅವರು, ಹೆಚ್ಎಎಲ್ ಏರ್ಪೋರ್ಟ್ ಹೊರಗಡೆ ಜನರನ್ನು ಉದ್ದೇಶಿಸಿ ಮಾತನಾಡಿದರು.
‘ದೂರದ ದೇಶದಿಂದ ನೇರ ಇಲ್ಲಿಗೆ ಬಂದೆ. ಭಾರತದ ಸೂರ್ಯೋದಯವಾಗುತ್ತಿರುವ ಈ ಹೊತ್ತಿನಲ್ಲಿ ಬೆಂಗಳೂರಿಗೆ ಬಂದಿರುವೆ. ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ಬಹಳ ಸಂತಸವಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಮೋದಿ ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 4:30 ರಿಂದ ಬೆಳಿಗ್ಗೆ 9:30ರ ವರೆಗೆ ಕೆಲ ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜೊತೆಗೆ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಸಂಚಾರ ಪೋಲಿಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.