ADVERTISEMENT

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಕಾಯಂ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 15:26 IST
Last Updated 17 ಜುಲೈ 2025, 15:26 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಕುಮಟಾದ ವನ್ನಳ್ಳಿಯಲ್ಲಿ ಆರು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಕಾರವಾರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಸೆಷನ್ಸ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕುಮಟಾ ತಾಲ್ಲೂಕಿನ ವನ್ನಳ್ಳಿಯ ಮೀನುಗಾರ ಅನ್ಸಾರಿ ಬಿನ್‌ ಖಾಸಿಂ ಜಿಂಗ್ರು (27) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಆರೋಪಿಯು ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿರುವುದು ಪ್ರಾಸಿಕ್ಯೂಷನ್‌ ದಾಖಲೆಗಳಿಂದ ದೃಢಪಟ್ಟಿದೆ. ಭಯಗೊಂಡಿದ್ದ ಬಾಲಕ ತನ್ನ ಮೇಲೆ  ಏನು ನಡೆದಿದೆ ಎಂಬುದನ್ನು ತಕ್ಷಣವೇ ಬಹಿರಂಗಪಡಿಸಿಲ್ಲ. ಆದರೆ, ವೈದ್ಯಕೀಯ ಪರೀಕ್ಷೆಯ ನಂತರ ಎಲ್ಲ ಸತ್ಯ ಸಂಗತಿಗಳೂ ಬಹಿರಂಗಗೊಂಡಿವೆ. ಹೀಗಾಗಿ, ದೂರನ್ನು ತಡವಾಗಿ ನೀಡಲಾಗಿದೆ ಎಂಬ ಅಪರಾಧಿಯ ವಾದವನ್ನು ಪುರಸ್ಕರಿಸಲಾಗದು. ವಿಚಾರಣಾ ನ್ಯಾಯಾಲಯದ ಆದೇಶ ಸರಿಯಾಗಿಯೇ ಇದೆ. ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿದೆ. 

ಪ್ರಕರಣವೇನು?:

‘ಕಾಗಲ್‌ ಹಿನಿ ಗ್ರಾಮದ ಅಬ್ದುಲ್‌ ಕರೀಂ ಅವರ ಅಂಗಡಿ ಎದುರು ಸಂತ್ರಸ್ತ ಬಾಲಕ 2022ರ ಮಾರ್ಚ್‌ 15ರಂದು ಆಟವಾಡಿಕೊಂಡಿದ್ದ. ಅನ್ಸಾರಿಯು ಬಾಲಕನನ್ನು ಬೈಕ್‌ನಲ್ಲಿ ಸುತ್ತು ಹಾಕಿಸುವುದಾಗಿ ತನ್ನ ಬೈಕ್‌ನಲ್ಲಿ ಕೂಡಿಸಿಕೊಂಡು ಅಘನಾಷಿನಿ ನದಿಯ ಸಮೀಪಕ್ಕೆ ಕರೆದೊಯ್ದಿದ್ದ. ಸುಮಾರು ಒಂದೂವರೆ ಕಿ.ಮೀ ದೂರಕ್ಕೆ ತೆರಳಿದ ಬಳಿಕ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ಮೂಲಕ ದೌರ್ಜನ್ಯ ಎಸಗಿದ್ದ’ ಎಂದು ಬಾಲಕನ ಸಂಬಂಧಿ ಪೊಲೀಸರಿಗೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಮತ್ತು ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ದೌರ್ಜನ್ಯ ಎಸಗಿರುವ ಆರೋಪ ದೃಢಪಟ್ಟಿತ್ತು. ಭಾರತೀಯ ದಂಡ ಸಂಹಿತೆ–1860ರ ಕಲಂ 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ) ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಲಂ 4ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ‍ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಕಾರವಾರದ ಸೆಷನ್ಸ್‌ ನ್ಯಾಯಾಲಯ ಆರೋಪಿ ಅನ್ಸಾರಿ ಅಪರಾಧಿ ಎಂದು 2022ರ ನವೆಂಬರ್ 24ರಂದು ಸಾರಿತ್ತು. 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.