ಕೆಂಗೇರಿ: ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಸಹೃದಯಿಯಾಗಿದ್ದರು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಸ್ಮರಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇಲ್ಲಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಎಚ್.ಎಸ್.ವೆಂಕಟೇಶಮೂರ್ತಿ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಹಿನ್ನೆಲೆಯಿಂದ ಬಂದ ಎಚ್ಎಸ್‌ವಿ, ಸಾಹಿತ್ಯ ಲೋಕದಲ್ಲಿ ತಮ್ಮ ಅಗಾಧ ಪ್ರತಿಭೆ ಹಾಗೂ ಪರಿಶ್ರಮದಿಂದ ಯಾವುದೇ ಬೆಂಬಲವಿಲ್ಲದೆ ಬೆಳೆದು ಬಂದರು ಎಂದು ಶ್ಲಾಘಿಸಿದರು.
ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ ಮಾತನಾಡಿ, ‘ಸಹಕಾರ ಮನೋಭಾವ ಹೊಂದಿದ್ದ ಎಚ್ಎಸ್‌ವಿ, ಕಲಾವಿದನ ಸೃಜನಶೀಲತೆಗೂ ಮನ್ನಣೆ ನೀಡಿ ಬದಲಾವಣೆಗೆ ಮುಕ್ತ ಅವಕಾಶ ನೀಡುತ್ತಿದ್ದರು’ ಎಂದು ನೆನಪಿಸಿಕೊಂಡರು.
ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ ಮಾತನಾಡಿ, ‘ಪುತಿನ ಕುರಿತ ನಾಟಕ ವೆಂಕಟೇಶಮೂರ್ತಿ ಅವರ ಕೊನೆಯ ಸಾಹಿತ್ಯಿಕ ಕೃಷಿಯಾಗಿದೆ. ಕೆಲ ಕಾರಣಂತರಗಳಿಂದ ನಾಟಕ ಮುದ್ರಣಕ್ಕೆ ಹಿನ್ನಡೆಯಾಗಿದೆ. ಎಲ್ಲ ಆರ್ಥಿಕ ವೆಚ್ಚಗಳನ್ನು ಭರಿಸಿ ಈ ನಾಟಕವನ್ನು ಮುದ್ರಿಸಿ ಲೋಕಾರ್ಪಣೆ ಮಾಡಲು ಸಾಹಿತ್ಯ ಪರಿಷತ್ತು ಸಿದ್ದವಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತಪುರ ಕ್ಷೇತ್ರ ಘಟಕದ ಅಧ್ಯಕ್ಷ ಎಚ್.ಎಸ್.ಸುಧೀಂದ್ರ ಕುಮಾರ್ ಮಾತನಾಡಿದರು. ಗಾಯಕಿ ಸಂಗೀತಾ ಕಟ್ಟಿ ಎಚ್.ಎಸ್.ವಿ ವಿರಚಿತ ಹಾಡುಗಳನ್ನು ಸಾದರಪಡಿಸಿದರು. ಮುಖಂಡರಾದ ವಿ.ವಿ ಸತ್ಯನಾರಾಯಣ, ಶಿವಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.