ADVERTISEMENT

‘ರಾಜಕಾರಣಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಲಿ’: ಸಿದ್ದಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:02 IST
Last Updated 23 ಏಪ್ರಿಲ್ 2019, 20:02 IST
ಕವಿ ಸಿದ್ದಲಿಂಗಯ್ಯ ಅವರು ಮಾತನಾಡಿದರು (ಎಡದಿಂದ) ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಕೆ.ರಾಜಕುಮಾರ್, ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ, ಶಾಂಭವಿ ಪ್ರಭು, ಚಂದ್ರಶೇಖರ ಕಂಬಾರ ಪಾಲ್ಗೊಂಡಿದ್ದರು–ಪ್ರಜಾವಾಣಿ ಚಿತ್ರ
ಕವಿ ಸಿದ್ದಲಿಂಗಯ್ಯ ಅವರು ಮಾತನಾಡಿದರು (ಎಡದಿಂದ) ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಕೆ.ರಾಜಕುಮಾರ್, ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ, ಶಾಂಭವಿ ಪ್ರಭು, ಚಂದ್ರಶೇಖರ ಕಂಬಾರ ಪಾಲ್ಗೊಂಡಿದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜಕಾರಣಿಗಳು ಓದಿನಿಂದ ವಿಮುಖರಾಗುತ್ತಿದ್ದಾರೆ. ಅವರು ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಅದರ ಮೂಲಕ ಸಮಾಜದ ಸಮಸ್ಯೆಗಳನ್ನು ಅರಿತುಕೊಳ್ಳಬಹುದು’ ಎಂದು ಕವಿ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಕೇಂದ್ರ ಸಾಹಿತ್ಯ ಅಕಾಡೆಮಿಯುಕರ್ನಾಟಕ ಪ್ರಕಾಶಕರ ಸಂಘದ ಸಹಯೋಗದೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ಆದರೂ ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರ ಪುಸ್ತಕೋದ್ಯಮಕ್ಕೆ ಉತ್ತೇಜನ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಸೆಸ್‌ ಅನ್ನು ಸಂಬಂಧಿಸಿದ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದುಸಾಹಿತಿಗಳು ಸರ್ಕಾರದ ಮೇಲೆ ಒತ್ತಡ ತರಬೇಕಾದ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಜಿ.ಪಿ.ರಾಜರತ್ನಂ ಹಾಗೂ ಗಳಗನಾಥರು ಪುಸ್ತಕಗಳನ್ನು ತಲೆ ಮೇಲೆ ಹೊತ್ತು ಮಾರಿದರು. ಹಲವು ಸಾಹಿತಿಗಳೂ ತಾವೇ ಪುಸ್ತಕದಂಗಡಿ ತೆರೆದು ಸಾಹಿತ್ಯ ಪರಿಚಾರಿಕೆಯಲ್ಲಿ ತೊಡಗಿದರು.ಅಂಥ ಹಿರಿಯ ಸಾಹಿತಿಗಳನ್ನು ಪುಸ್ತಕ ದಿನವಾದ ಇಂದು ನೆನಪಿಸಿಕೊಳ್ಳಬೇಕು’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷಚಂದ್ರಶೇಖರ ಕಂಬಾರ ಮಾತನಾಡಿ,‘ಕನ್ನಡ ಉಳಿಸಲು ಶ್ರಮಿಸುತ್ತಿರುವ ಶಿಕ್ಷಕರನ್ನು ಕರೆದು ಗೌರವಿಸುವ ಕೆಲಸವಾಗಬೇಕು. ಅವರನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಅವರು ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

ಸಿರಿಗನ್ನಡ ಪ್ರಕಾಶನದ ಕೆ.ರಾಜಕುಮಾರ್‌ ಹಾಗೂ ಉಡುಪಿಯ ಸೀತಾ ಪುಸ್ತಕ ಮಳಿಗೆಯಶಾಂಭವಿ ಪ್ರಭು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

***

ಪುಸ್ತಕವೆಂದರೆ ಸಂಸ್ಕೃತಿ, ಅರಿವಿನ ಪರದೆಯನ್ನು ವಿಸ್ತರಿಸುವ ಸಾಧನ ಮತ್ತು ನೆಲದ ಮರೆಯ ನಿಧಾನ. ಅಂಥ ಪುಸ್ತಕ ದಿನದಂದು ನನ್ನನ್ನು ಗೌರವಿಸಿರುವುದು ಸಂತಸ ತಂದಿದೆ
- ಕೆ.ರಾಜಕುಮಾರ್‌, ಪ್ರಕಾಶಕ

**

ಕನ್ನಡ ಶಿಕ್ಷಕರು ನನ್ನಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸಿದರು. ಬೆಂಗಳೂರಿನ ಹಲವು ಪ್ರಕಾಶಕರು ಸಾಲದ ರೂಪದಲ್ಲಿ ಪುಸ್ತಕಗಳನ್ನು ನೀಡಿ, ಪುಸ್ತಕ ಪರಿಚಾರಿಕೆಯನ್ನಾಗಿ ಮಾಡಿದರು
- ಶಾಂಭವಿ ಪ್ರಭು, ಪ್ರಕಾಶಕಿ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.