ADVERTISEMENT

ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ: ಪೊಲೀಸ್‌ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:35 IST
Last Updated 31 ಜುಲೈ 2019, 19:35 IST
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಪೊಲೀಸ್‌ ಅಧಿಕಾರಿಗಳ ಜೊತೆ ನೀಲಮಣಿ ಎನ್. ರಾಜು, ವಜುಭಾಯಿ ವಾಲಾ ಮತ್ತು ಬಿ.ಎಸ್‌. ಯಡಿಯೂರಪ್ಪ ಇದ್ದಾರೆ
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾದ ಪೊಲೀಸ್‌ ಅಧಿಕಾರಿಗಳ ಜೊತೆ ನೀಲಮಣಿ ಎನ್. ರಾಜು, ವಜುಭಾಯಿ ವಾಲಾ ಮತ್ತು ಬಿ.ಎಸ್‌. ಯಡಿಯೂರಪ್ಪ ಇದ್ದಾರೆ   

ಬೆಂಗಳೂರು: ‘ಪ್ರಾಮಾಣಿಕತೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಅಧಿಕಾರಿಗಳಿಗೆ ಸರ್ಕಾರ ಸದಾ ಬೆಂಬಲ, ಪ್ರೋತ್ಸಾಹ ನೀಡಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶ್ವಾಸನೆ ನೀಡಿದರು.

ರಾಜಭವನದಲ್ಲಿ ಬುಧವಾರ ಗೃಹ ಇಲಾಖೆಯ 65 ಅಧಿಕಾರಿ ಮತ್ತು ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಂಘಟಿತ ಅಪರಾಧಿಗಳು, ಮತೀಯ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ಪರಿಣಾಮಕಾರಿಯಾಗಿ ಕಾರ್ಯ‌ನಿರ್ವಹಿಸಬೇಕು’ ಎಂದು ಸಲಹೆ ನೀಡಿದ ಯಡಿಯೂರಪ್ಪ, ‘ಕರ್ತವ್ಯಕ್ಕೆ ಯಾವುದೇ ಚ್ಯುತಿ ಬಾರದಂತೆ ಬದ್ಧತೆಯಿಂದ ಕಾರ್ಯನಿರ್ವಹಿಸುವ ಹೊಣೆ ನಿಮ್ಮದಾಗಿರಲಿ’ ಎಂದರು.

ADVERTISEMENT

ಪದಕ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ‘ಪೊಲೀಸ್‌ ಇಲಾಖೆ ಅತ್ಯಂತ ಪ್ರಮುಖ ಮತ್ತು ಜವಾಬ್ದಾರಿಯುತ ಇಲಾಖೆ. ಪೊಲೀಸರು ಪ್ರಾಮಾಣಿಕತೆ, ಬದ್ಧತೆ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು’ ಎಂದರು.

ಭಾಷಣದ ಕೊನೆಯಲ್ಲಿ ’ಭೋಲೋ ಭಾರತ್ ಮಾತಾಕಿ’ ಎಂದ ರಾಜ್ಯಪಾಲರು, ಸಭಿಕರು ಜೈಕಾರ ಕೂಗಿದ ಬಳಿಕ, ‘ನಮ್ಮ ಜೈಕಾರ ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸುವಂತಿರಬೇಕು. ಅದು ಪಾಕಿಸ್ತಾನದವರೆಗೂ ಕೇಳಬೇಕು’ ಎಂದು ಹುರಿದುಂಬಿಸಿದರು.

ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಎಡಿಜಿಪಿಗಳಾದ ಭಾಸ್ಕರ್ ರಾವ್, ಕಮಲ್ ಪಂತ್, ಪೊಲೀಸ್‌ ಕಮಿಷನರ್‌ ಅಲೋಕ್‍ಕುಮಾರ್, ಶಾಸಕರಾದ ಆರ್. ಅಶೋಕ, ವಿಧಾನಪರಿಷತ್ ಸದಸ್ಯ ರಮೇಶ ಗೌಡ ಇದ್ದರು.

ಪೊಲೀಸ್‌ ಸೇವಾ ಪದಕ ಪ್ರದಾನ

ರಾಷ್ಟ್ರಪತಿಗಳ 2016ನೇ ಸಾಲಿನ ವಿಶಿಷ್ಟ ಸೇವಾ ಪದಕಕ್ಕೆ ಎಡಿಜಿಪಿಗಳಾದ ಡಾ.ಎ.ಎಸ್.ಎನ್. ಮೂರ್ತಿ ಮತ್ತು ಡಾ. ಎಂ.ಎ. ಸಲೀಂ ಭಾಜರಾಗಿದ್ದರು. 2017ನೇ ಸಾಲಿನ ಪ್ರಶಸ್ತಿಗೆ ಎಡಿಜಿಪಿ ಕೆ.ಎಸ್.ಆರ್. ಚರಣ್ ರೆಡ್ಡಿ ಮತ್ತು ಮಾಲಿನಿ ಕೃಷ್ಣಮೂರ್ತಿ ಅರ್ಹರಾಗಿದ್ದರು. ಅಲ್ಲದೆ, 2016 ಹಾಗೂ 2017ರ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೊಡ ಮಾಡಲಾಗುವ ಪದಕಗಳಿಗೆ ಎಡಿಜಿಪಿಗಳು, ಐಜಿಪಿಗಳು, ಎಸ್ಪಿ, ಡಿವೈಎಸ್ಪಿ, ಕಮಾಂಡೆಂಟ್, ಇನ್‌ಸ್ಪೆಪೆಕ್ಟರ್, ಪಿಎಸ್‍ಐ, ಎಎಸ್‍ಐ, ಪೊಲೀಸ್ ಪೇದೆಗಳು ಸೇರಿ‌ ಒಟ್ಟು 65 ಮಂದಿ ಪೊಲೀಸ್ ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.