ADVERTISEMENT

ಭಯ ಹುಟ್ಟಿಸಬೇಡಿ, ಭಯ ಹುಟ್ಟಿಸೋರ ಬಿಡಬೇಡಿ: ನೂತನ ಕಮಿಷನರ್ ಭಾಸ್ಕರ ರಾವ್

ಅಧಿಕಾರಿಗಳ ಸಭೆ ನಡೆಸಿದ ಕಮಿಷನರ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:52 IST
Last Updated 3 ಆಗಸ್ಟ್ 2019, 19:52 IST
ಭಾಸ್ಕರ ರಾವ್
ಭಾಸ್ಕರ ರಾವ್   

ಬೆಂಗಳೂರು: ‘ಭಯ ಹುಟ್ಟಿಸುವ ರೀತಿಯಲ್ಲಿ ದಿಢೀರ್ ದಾಳಿ ಮಾಡದೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ಭಯ ಹುಟ್ಟಿಸುವ ರೌಡಿಗಳನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಅವರ ಕೃತ್ಯಕ್ಕೆ ಕಡಿವಾಣ ಹಾಕಿ’.

ನಗರದ ನೂತನ ಕಮಿಷನರ್ ಭಾಸ್ಕರ ರಾವ್ ಅವರು ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ಖಡಕ್ ಸೂಚನೆ ಇದು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಶನಿವಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಭಾಸ್ಕರ್ ರಾವ್, ‘ನಗರವನ್ನು ಅಪರಾಧ ಮುಕ್ತವಾಗಿಸಲು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ‘ಎಂದೆಂದಿಗೂ ನಾವು ನಿಮ್ಮೊಂದಿಗೆ‘ ಎಂಬ ಘೋಷವಾಕ್ಯದೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

‘ಬೆಂಗಳೂರಿನಲ್ಲೇ ಓದಿ ಬೆಳೆದಿದ್ದೇನೆ. ಇಲ್ಲಿಯ ಪ್ರತಿಯೊಂದು ಪ್ರದೇಶ ಹಾಗೂ ಅಪರಾಧ ಕೃತ್ಯಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ. ನನ್ನದೇ ರೀತಿಯಲ್ಲಿ ಬೆಂಗಳೂರನ್ನು ಅಪರಾಧಮುಕ್ತ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ನೀವೆಲ್ಲರೂ ಸಹಕರಿಸಬೇಕು’ ಎಂದು ಕೋರಿರುವುದಾಗಿ ಗೊತ್ತಾಗಿದೆ.

‘ನಗರದ ಪೊಲೀಸ್ ವ್ಯವಸ್ಥೆಯನ್ನು ವಿಭಾಗವಾರು ವಿಭಜಿಸಲಾಗಿದೆ. ಒಂದೊಂದು ವಿಭಾಗವೂ ಜಿಲ್ಲೆ ಇದ್ದಂತೆ. ಇಲ್ಲಿಯ ಡಿಸಿಪಿಗಳೇ ಜಿಲ್ಲಾ ಎಸ್ಪಿಗಳಿದ್ದಂತೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಜನರ ನೋವಿಗೆ ಸ್ಪಂದಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಡಿಸಿಪಿಗಳು ಇಲಾಖೆಗೆ ಒಳ್ಳೆಯ ಹೆಸರು ತರಬೇಕು’ ಎಂದು ಭಾಸ್ಕರ ರಾವ್ ಹೇಳಿರುವುದಾಗಿ ಮೂಲಗಳು ಹೇಳಿವೆ.

‘ಡ್ರಗ್ಸ್ ಹಾಗೂ ರೌಡಿಗಳ ಹಾವಳಿ ನಗರದಲ್ಲಿ ಹೆಚ್ಚಾಗಿದ್ದು, ಅದುವೇ ಅಪರಾಧ ಕೃತ್ಯಗಳ ಏರಿಕೆಗೂ ಕಾರಣವಾಗಿದೆ. ಡ್ರಗ್ಸ್‌ ಜಾಲ ಹಾಗೂ ರೌಡಿಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು’ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಸಿಬ್ಬಂದಿಗೂ ಪ್ರವೇಶವಿರಲಿಲ್ಲ

ಕಮಿಷನರ್ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆಯಲ್ಲಿ ಕಚೇರಿಯ ಸಿಬ್ಬಂದಿಗೂ ಪ್ರವೇಶವಿರಲಿಲ್ಲ.

ಸಭೆ ಆರಂಭಕ್ಕೂ ಮುನ್ನ ಫೋಟೊ ತೆಗೆದುಕೊಳ್ಳಲು ಮಾತ್ರ ಕೆಲವರಿಗೆ ಅವಕಾಶ ನೀಡಲಾಗಿತ್ತು. ನಂತರ, ಎಲ್ಲರನ್ನೂ ಕೊಠಡಿಯಿಂದ ಹೊರಗೆ ಕಳುಹಿಸಲಾಯಿತು. ‘ಸಭೆ ಮುಗಿಯುವರೆಗೂ ಯಾರೊಬ್ಬರನ್ನೂ ಒಳಗೆ ಬಿಡಬೇಡಿ’ ಎಂದು ಭಾಸ್ಕರ ರಾವ್ ಅವರೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.