ADVERTISEMENT

ಮಚ್ಚಿನಿಂದ ಹಲ್ಲೆ; ಆರೋಪಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 20:02 IST
Last Updated 20 ಡಿಸೆಂಬರ್ 2019, 20:02 IST

ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಭರತ್‌ (30) ಎಂಬಾತನ ಕೊಲೆ ಪ್ರಕರಣದ ಆರೋಪಿ ರಾಹುಲ್ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ.

‘ಅಗ್ರಹಾರ ಲೇಔಟ್‍ನಲ್ಲಿ ಭರತ್‌ನನ್ನು ಕೊಲೆ ಮಾಡಿದ್ದ ರಾಹುಲ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಶುಕ್ರವಾರ ಸಂಜೆ ಆತನನ್ನು ಹಿಡಿಯಲು ಹೋದಾಗ ಕಾನ್‌ಸ್ಟೆಬಲ್ ಮೇಲೆಯೇ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ನಂದ್‌ಕುಮಾರ್ ಅವರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

‘ಗುಂಡೇಟಿನಿಂದ ಗಾಯಗೊಂಡಿರುವ ರಾಹುಲ್‌ನನ್ನು ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ರೀಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.

ADVERTISEMENT

ಬಾರ್‌ ಎದುರು ನಡೆದಿದ್ದ ಕೊಲೆ: ಯಲಹಂಕದ ಕೋಗಿಲು ನಿವಾಸಿ ಭರತ್ (30) ಡಿ. 16ರಂದು ರಾತ್ರಿ ಅಗ್ರಹಾರ ಲೇಔಟ್‌ನ ಬಾರ್‌ಗೆ ಹೋಗಿದ್ದರು. ಮದ್ಯ ಕುಡಿದು ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳು ಆತನ ಮೇಲೆ ದಾಳಿ ಮಾಡಿ ಕೊಂದಿದ್ದರು.

ರಾಹುಲ್ ಹಾಗೂ ಆತನ ಸಹಚರರೇ ಕೊಲೆ ಮಾಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿತ್ತು. ಶುಕ್ರವಾರ ಮಧ್ಯಾಹ್ನ ಲೋಕೇಶ್ ಹಾಗೂ ಹೇಮಂತ್ ಎಂಬುವರನ್ನು ಬಂಧಿಸಲಾಗಿತ್ತು. ಅವರಿಬ್ಬರು ನೀಡಿದ್ದ ಮಾಹಿತಿಯಂತೆ ರಾಹುಲ್‌ನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.