ಬೆಂಗಳೂರು: ಮನೆಪಾಠಕ್ಕೆ(ಟ್ಯೂಷನ್) ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಆರೋಪಿಯನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಆರೋಪಿ ಕನಕಪುರದ ಅಭಿಷೇಕ್ (25) ಎಂಬಾತನನ್ನು ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ರಕ್ಷಿಸಿ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಕನಕಪುರದ ದೊಡ್ಡ ಸಾತೇನಹಳ್ಳಿಯ ನಿವಾಸಿ ಅಭಿಷೇಕ್, ಡಿಪ್ಲೊಮಾ ವ್ಯಾಸಂಗ ಮಾಡಿದ್ದ. ಆರೋಪಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಮಗುವಿದೆ. ವೈಯಕ್ತಿಕ ಕಾರಣಗಳಿಂದ ಪತ್ನಿಯಿಂದ ಆರೋಪಿ ದೂರವಾಗಿದ್ದ. ಜೆ.ಪಿ.ನಗರದ ಸಾರಕ್ಕಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಶಾಲಾ ಮಕ್ಕಳಿಗೆ ಮನೆಪಾಠ(ಟ್ಯೂಷನ್) ತೆಗೆದುಕೊಳ್ಳುತ್ತಿದ್ದ. ಬಾಲಕಿ ಸಹ ಆರೋಪಿ ಬಳಿಗೆ ಟ್ಯೂಷನ್‌ಗೆ ಬರುತ್ತಿದ್ದಳು. ಬಾಲಕಿಯ ತಂದೆ ಕ್ಯಾಂಟೀನ್ ನಡೆಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.
‘ನವೆಂಬರ್ 23ರಂದು ಬಾಲಕಿ ಟ್ಯೂಷನ್‌ಗೆ ಹೋಗಿದ್ದಳು. ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಆರೋಪಿ ಟ್ಯೂಷನ್ ನಡೆಸುತ್ತಿದ್ದ ಸ್ಥಳಕ್ಕೆ ಪೋಷಕರು ಹೋಗಿ ಪರಿಶೀಲಿಸಿದ್ದರು. ಕೊಠಡಿಗೆ ಬೀಗ ಹಾಕಿತ್ತು. ಇದನ್ನು ಕಂಡು ಆತಂಕಗೊಂಡಿದ್ದ ಪೋಷಕರು, ದೂರು ನೀಡಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.
‘ಪ್ರಕರಣದ ತನಿಖೆ ವೇಳೆ ಆರೋಪಿ ಮನೆಯನ್ನು ಪರಿಶೀಲನೆ ನಡೆಸಲಾಯಿತು. ಮನೆಯಲ್ಲೇ ಆರೋಪಿ ಮೊಬೈಲ್ ಬಿಟ್ಟು ಹೋಗಿದ್ದ. ಮೊಬೈಲ್ ಜಪ್ತಿ ಮಾಡಿಕೊಂಡು ಪರಿಶೀಲನೆ ನಡೆಸಲಾಯಿತು. ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹಾಗೂ ಮದುವೆ ಆಗಿದ್ದೇನೆಂದು ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ’ ಎಂದು ಮೂಲಗಳು ಹೇಳಿವೆ.
‘ಆರೋಪಿ ಪೊಲೀಸರಿಗೆ ಸಿಕ್ಕಿ ಬೀಳಬಾರದು ಎಂಬ ಉದ್ದೇಶದಿಂದ ಘಟನೆ ಬಳಿಕ ಫೋನ್, ಫೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿದಂತೆ ಯಾವುದೇ ಆನ್‌ಲೈನ್ ವಹಿವಾಟು ನಡೆಸುತ್ತಿರಲಿಲ್ಲ. ಇದರಿಂದ ಕಾರ್ಯಾಚರಣೆ ಸ್ವಲ್ಪ ತಡವಾಯಿತು. ಆರೋಪಿ ಬಾಲಕಿಯನ್ನು ಕೊರೆದೊಯ್ಯುವ ದೃಶ್ಯಾವಳಿಗಳು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆ ಆಗಿದ್ದವು. ಅದನ್ನು ಆಧರಿಸಿಯೇ ಕಾರ್ಯಾಚರಣೆ ನಡೆಸಲಾಯಿತು. ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗುವುದಕ್ಕೂ ಮುನ್ನ ₹70 ಸಾವಿರ ಹಣವನ್ನು ಬ್ಯಾಂಕ್‌ನಿಂದ ಬಿಡಿಸಿಕೊಂಡು ಇಟ್ಟುಕೊಂಡಿದ್ದ. ಅದನ್ನೇ ಖರ್ಚಿಗೆ ಬಳಕೆ ಮಾಡಿಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.