ADVERTISEMENT

ರೌಡಿಗಳಿಂದ ಸ್ವಚ್ಛವಾದ ‘ಪೊಲೀಸ್‌ ಕೆರೆ’

ಹರಪ್ಪನಹಳ್ಳಿ ಹತ್ತಿರ ರಸ್ತೆ ಬದಿ ಮೂರು ಎಕರೆಯಲ್ಲಿ ಮೈಚಾಚಿಕೊಂಡಿರುವ ಕೆರೆಗೀಗ ನವಚೈತನ್ಯ

ಭೀಮಣ್ಣ ಮಾದೆ
Published 30 ನವೆಂಬರ್ 2018, 16:23 IST
Last Updated 30 ನವೆಂಬರ್ 2018, 16:23 IST
ಹಿಂದೆ ಕಳೆ ತುಂಬಿ ನಿಂತಿದ್ದ ಕೆರೆ(ಎಡಚಿತ್ರ). ಪುನರುಜ್ಜೀವನಗೊಂಡ ಹರಪ್ಪನಹಳ್ಳಿ ಕೆರೆಯ ಪಕ್ಷಿ ನೋಟ (ಬಲಚಿತ್ರ)
ಹಿಂದೆ ಕಳೆ ತುಂಬಿ ನಿಂತಿದ್ದ ಕೆರೆ(ಎಡಚಿತ್ರ). ಪುನರುಜ್ಜೀವನಗೊಂಡ ಹರಪ್ಪನಹಳ್ಳಿ ಕೆರೆಯ ಪಕ್ಷಿ ನೋಟ (ಬಲಚಿತ್ರ)   

ಬೆಂಗಳೂರು: ಮೊದಲು ಅಟ್ಟಹಾಸ ಮೆರೆಯಲು ಲಾಂಗು–ಮಚ್ಚುಗಳನ್ನು ಹಿಡಿದಿದ್ದ ರೌಡಿಗಳು, ಈಗ ಅವೇ ಅಸ್ತ್ರಗಳನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವ ಮೂಲಕ ಮನಪರಿವರ್ತನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಕಳೆ ತುಂಬಿ ಸೊರಗಿದ್ದ ಹರಪ್ಪನಹಳ್ಳಿ ಕೆರೆಯನ್ನು ಪೊಲೀಸರ ಜೊತೆಗೂಡಿಸ್ವಚ್ಛಗೊಳಿಸಿರುವ ಅವರು, ಆ ಕೆರೆಯನ್ನು ನಳನಳಿಸುವಂತೆ ಮಾಡಿದ್ದಾರೆ.

ಬನ್ನೇರುಘಟ್ಟದಿಂದ ಜಿಗಣಿಗೆ ತೆರಳುವ ಮಾರ್ಗ ಮಧ್ಯೆ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪ್ಪನಹಳ್ಳಿ ಹತ್ತಿರ ರಸ್ತೆ ಬದಿ ಮೂರು ಎಕರೆಯಲ್ಲಿ ಮೈಚಾಚಿಕೊಂಡಿರುವ ಕೆರೆಯ ಅಂಗಳದಲ್ಲಿ ಹಿಂದೆ ನೀರು ಕಾಣದಂತೆ ಕಳೆ ಬೆಳೆದು ನಿಂತಿತ್ತು. ಅದಲ್ಲದೇ ಜನ ಕಸ ಹಾಗೂ ತ್ಯಾಜ್ಯವನ್ನು ಸುರಿಯುತ್ತಿದ್ದರಿಂದ ಗಬ್ಬು ವಾಸನೆಯಿಂದ ಅದು ಸುತ್ತಲಿನ ಪರಿಸರವನ್ನು ಕಲುಷಿತಗೊಳಿಸಿತ್ತು.

ಕೆರೆಯ ಹತ್ತಿರ ಹೋಗುವಾಗ ಜನ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದ್ದು, ಅದೇ ಹರಪ್ಪನಹಳ್ಳಿ ಕೆರೆ ತನ್ನ ಸೌಂದರ್ಯದಿಂದ ಗಮನ ಸೆಳೆಯುತ್ತಿದೆ. ಡಿವೈಎಸ್‌ಪಿ ಉಮೇಶ್‌, ಸ್ಥಳೀಯ ರೌಡಿ ಶೀಟರ್‌ಗಳನ್ನು ಹಾಗೂ ಪೊಲೀಸರನ್ನು ಬಳಸಿಕೊಂಡು ಕೆರೆಗೆ ಕಾಯಕಲ್ಪ ನೀಡಿದ್ದಾರೆ.

ADVERTISEMENT

ಕೆರೆ ಈಗ ಹೇಗಿದೆ?: ಒಂಬತ್ತು ತೆಪ್ಪಗಳನ್ನು ಬಳಸಿ ಕೆರೆಯ ಒಡಲಾಳದ ಕಳೆಯನ್ನು ತೆಗೆದು ಹಾಕಿ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲಾಗಿದೆ. ಕೆರೆಯ ಅಂತರ್ಜಲ ಮಟ್ಟದಲ್ಲೂ ಹೆಚ್ಚಳವಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಲಾಗಿದ್ದು, ಬಣ್ಣ ಬಳಿದು ಅದರ ಮೇಲೆ ಜಲಚರ ಪ್ರಾಣಿಗಳ ಚಿತ್ರ, ಗ್ರಾಮೀಣ ಪ್ರದೇಶದ ಜನಪದೀಯ ಬದುಕಿನ ಚಿತ್ರಗಳನ್ನು ಬಿಡಿಸಲಾಗಿದೆ.

ಕೆರೆಯಲ್ಲಿ ಎರಡು ಬಾವಿಗಳಿದ್ದು, ಅವುಗಳನ್ನು ಪುನರುಜ್ಜೀವನಗೊಳಿಸಿ ಅವುಗಳ ಅಂದವನ್ನು ಸಹ ಹೆಚ್ಚಿಸಲಾಗಿದೆ. ಕೆರೆಯ ಮೇಲೆ ಪಾದಚಾರಿ ಮಾರ್ಗವನ್ನು ನಿರ್ಮಿಸಿ ಉದ್ಯಮಿಗಳ ಸಹಾಯದಿಂದ ಅದರ ಉದ್ದಕ್ಕೂ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ದಾರಿ ವಿಭಜಕದ ಮಧ್ಯೆ ವಿವಿಧ ಬಗೆಯ ಹೂವಿನ ಗಿಡಗಳನ್ನು ಹಾಗೂ ಸಸಿಗಳನ್ನು ಬೆಳೆಸಲಾಗಿದೆ. ಕೆರೆಗೆ ಇಳಿಯಲು ಮೆಟ್ಟಿಲುಗಳನ್ನು ಸಹ ನಿರ್ಮಾಣ ಮಾಡಲಾಗಿದೆ.

ಸದ್ಯ ಕೆರೆಗೆ ಕಸ ಸುರಿಯುವವರ ಮೇಲೆ ಕಣ್ಗಾವಲು ಇಡಲು ಬ್ಯಾರಿಕೇಡ್‌ಗಳನ್ನು ಹಾಕಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಕೆರೆಯ ಒತ್ತುವರಿ ತಡೆಯಲು ತಡೆಗೋಡೆ ನಿರ್ಮಿಸಲಾಗಿದೆ. ಮೀನುಗಾರಿಕೆಗೂ ಅವಕಾಶ ಮಾಡಿಕೊಡಲಾಗಿದೆ. ಅಕ್ಕಪಕ್ಕದ ಜನ ಕೆರೆಯ ನೀರನ್ನು ಬಳಸುತ್ತಿದ್ದಾರೆ. ಕೆರೆಯನ್ನು ಪೊಲೀಸ್‌ ಇಲಾಖೆ ದತ್ತು ತೆಗೆದುಕೊಂಡು ಹರಪ್ಪನಹಳ್ಳಿ ಪೊಲೀಸ್‌ ಕೆರೆ ಎಂದು ಮರು ನಾಮಕರಣ ಮಾಡಲಾಗಿದೆ.

‘ಓಡಾಡುವಾಗ ಈ ಕೆರೆಯನ್ನು ಗಮನಿಸುತ್ತಿದ್ದೆವು, ಕಳೆ ಬೆಳೆದು ನೀರೇ ಕಾಣುತ್ತಿರಲಿಲ್ಲ. ಅಲ್ಲದೆಬೇರೆ ರಾಜ್ಯಗಳಿಂದ ಗ್ರಾನೈಟ್‌ ಖರೀದಿಗೆ ಬರುವವರು ಈ ಕೆರೆಯನ್ನು ಗಮನಿಸಿ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದರು. ಜಲಮೂಲಗಳ ಕುರಿತು ಅರಿವು ಮೂಡಿಸಲು ಕೆರೆಯನ್ನು‍ಪುನರುಜ್ಜಿವನಗೊಳಿಸಿದೆವು. ನಮ್ಮ ಪ್ರಯತ್ನಕ್ಕೆ ಸ್ಥಳೀಯರು ಹೆಚ್ಚಿನ ಮಟ್ಟದ ಸಹಕಾರ ನೀಡಿದರು’ ಎನ್ನುತ್ತಾರೆ ಇದರ ರೂವಾರಿ ಪೊಲೀಸ್‌ ಅಧಿಕಾರಿ ಉಮೇಶ್‌.

‘ಹಿಂದೆ ಕೆರೆಯ ಅಂಗಳದಲ್ಲಿ ಕಳೆ ಬೆಳೆದು ದುರ್ವಾಸನೆ ಬೀರುತ್ತಿತ್ತು. ಪೊಲೀಸರ ಸಹಾಯದಿಂದ ಕೆರೆ ಸ್ವಚ್ಛವಾಗಿದೆ. ರಾತ್ರಿ ಕೆರೆ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತದೆ. ಈಗ ಅದನ್ನು ನಮ್ಮೂರ ಕೆರೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ’ ಎನ್ನುತ್ತಾರೆ ಇಲ್ಲಿಯ ನಿವಾಸಿ ರಮೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.