ADVERTISEMENT

ರೌಡಿ ಚಂಡಾಲ್‌ ಕಾಲಿಗೆ ಗುಂಡೇಟು

ವ್ಯಾಪಾರಿಗಳನ್ನು ಬೆದರಿಸಿ ಹಫ್ತಾ ವಸೂಲಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:32 IST
Last Updated 22 ಜುಲೈ 2019, 19:32 IST

ಬೆಂಗಳೂರು: ಕೊಲೆ, ಕೊಲೆಗೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿ ಅನಿಲ್‌ಕುಮಾರ್ ಅಲಿಯಾಸ್ ಚಂಡಾಲ್‌ನನ್ನು ಕಾಲಿಗೆ ಗುಂಡು ಹಾರಿಸಿ ಚಾಮರಾಜಪೇಟೆ ಪೊಲೀಸರು ಭಾನುವಾರ ರಾತ್ರಿ ಸೆರೆ ಹಿಡಿದಿದ್ದಾರೆ.

ಪೊಲೀಸರ ಮೇಲೆಯೇ ಆರೋಪಿ ಚಂಡಾಲ್‌, ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ರೌಡಿಯ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ರೌಡಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಂದ ಹಲ್ಲೆಗೀಡಾದ ಕಾನ್‌ಸ್ಟೆಬಲ್ ಚಂದ್ರಶೇಖರ್ ಪಾಟೀಲ ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ.

ADVERTISEMENT

‘ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಳೆದ ಜೂನ್‌ನಲ್ಲಿ ಸೇಠ್‌ ಎಂಬುವರನ್ನು ಅಡ್ಡಗಟ್ಟಿದ್ದ ಚಂಡಾಲ್, ಸುಲಿಗೆಗೆ ಯತ್ನಿಸಿದ್ದ. ಹಣ ಕೊಡದಿದ್ದಾಗ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಆ ಸಂಬಂಧ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೇ ರೌಡಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಟನ್‌ಪೇಟೆ ವ್ಯಾಪ್ತಿಯ ಆನಂದಪುರದ ಪಶುವೈದ್ಯ ಆಸ್ಪತ್ರೆಯ ಬಳಿ ರೌಡಿ ಚಂಡಾಲ್ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ,ರಾತ್ರಿ 12.45ರ ಸುಮಾರಿಗೆ ಸ್ಥಳಕ್ಕೆ ಹೋಗಿದ್ದರು. ಕಾನ್‌ಸ್ಟೆಬಲ್‌ ಚಂದ್ರಶೇಖರ್ ಪಾಟೀಲ, ರೌಡಿಯನ್ನು ಹಿಡಿಯಲು ಮುಂದಾಗಿದ್ದರು. ಆಗ ಆತ ಡ್ರ್ಯಾಗರ್‌ನಿಂದ ಕಾನ್‌ಸ್ಟೆಬಲ್‌ಗೆ ಇರಿದಿದ್ದ.’

‘ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದರು. ಆದರೂ ಆರೋಪಿ ಹಲ್ಲೆ ನಡೆಸಲು ಮುಂದಾಗಿದ್ದರಿಂದ ಆತನ ಕಾಲಿಗೆ ಗುಂಡು ಹೊಡೆದಿದ್ದರು’ ಎಂದು ಅಧಿಕಾರಿ ಮಾಹಿತಿ ನೀಡಿದರು.

ವ್ಯಾಪಾರಿಗಳಿಂದ ಹಫ್ತಾ ವಸೂಲಿ: ‘ಚಂಡಾಲ್‌ನ ವಿರುದ್ಧ 14 ಪ್ರಕರಣಗಳು ದಾಖಲಾಗಿವೆ. ಸಿಸಿಬಿ ಪೊಲೀಸರು
ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಮೇಲೆ ಹೊರಬರುತ್ತಿದ್ದ ಆತ, ಪುನಃ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ’ ಎಂದರು ಅಧಿಕಾರಿ ಹೇಳಿದರು.

‘ಚಾಮರಾಜಪೇಟೆ ಹಾಗೂ ಕಾಟನ್‌ಪೇಟೆ ಎರಡೂ ಠಾಣೆ ರೌಡಿಗಳ ಪಟ್ಟಿಯಲ್ಲಿ ಚಂಡಾಲ್‌ನ ಹೆಸರಿದೆ. ಸಿಟಿ ಮಾರುಕಟ್ಟೆಯ ಸಣ್ಣ ವ್ಯಾಪಾರಿಗಳಿಗೆ ಚಾಕು ತೋರಿಸಿ ಬೆದರಿಸುತ್ತಿದ್ದ ಆರೋಪಿ, ಅವರಿಂದ ಹಫ್ತಾ ವಸೂಲಿ ಮಾಡುತ್ತಿದ್ದ. ಆ ಬಗ್ಗೆ ಸಾಕಷ್ಟು ಮಂದಿ ದೂರು ನೀಡಿದ್ದರು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.