ADVERTISEMENT

ಮಾರಕಾಸ್ತ್ರ ಹಿಡಿದು ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 16:41 IST
Last Updated 17 ಸೆಪ್ಟೆಂಬರ್ 2020, 16:41 IST

ಬೆಂಗಳೂರು: ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರೇಮ್‌ ಕುಮಾರ್ (30) ಎಂಬಾತನ ಕಾಲಿಗೆ ಗುಂಡು ಹಾರಿಸಿ ಗುರುವಾರ ಬಂಧಿಸಲಾಗಿದೆ.

ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸೆ. 8ರಂದು ರಾತ್ರಿ ಡಿ.ಜೆ.ಹಳ್ಳಿಯ ಕೆಎಚ್‌ಬಿ ಮುಖ್ಯರಸ್ತೆಯಲ್ಲಿರುವ ವಿನುತಾ ಬಾರ್‌ನಲ್ಲಿ ದೀಪಕ್ ಮತ್ತು ಕಪಿಲ್ ಎಂಬುವರ ಜತೆ ಪ್ರೇಮ್ ಕುಮಾರ್ ಗಲಾಟೆ ಮಾಡಿದ್ದ. ಅದೇ ವಿಚಾರಕ್ಕೆ ವೈಷಮ್ಯ ಬೆಳೆದಿತ್ತು. ಬಾರ್‌ನಿಂದ ಹೊರಬಂದಿದ್ದ ದೀಪಕ್ ಹಾಗೂ ಕಪಿಲ್ ಮೇಲೆ ಆರೋಪಿ ಏಕಾಏಕಿ ದಾಳಿ ಮಾಡಿದ್ದ. ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ಹೇಳಿದರು.

ADVERTISEMENT

‘ಎಲ್‌.ಆರ್. ಬಂಡೆ ಬಳಿ ಆರೋಪಿ ಅಡಗಿದ್ದ. ಆ ಬಗ್ಗೆ ಮಾಹಿತಿ ಪಡೆದ ಪಿಎಸ್‌ಐ ನಾಗದೇವ್, ಹೆಡ್ ಕಾನ್‌ಸ್ಟೆಬಲ್ ರಂಗನಾಥ್ ಹಾಗೂ ಸಿಬ್ಬಂದಿ ಗುರುವಾರ ಬೆಳಿಗ್ಗೆ 5 ಸ್ಥಳಕ್ಕೆ ಹೋಗಿದ್ದರು. ಆರೋಪಿಯು ರಂಗನಾಥ್ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಪಿಎಸ್‌ಐ ನಾಗದೇವ್, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಅವರ ಮೇಲೆಯೂ ಹಲ್ಲೆಗೆ ಆರೋಪಿ ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಪಿಎಸ್‌ಐ ಗುಂಡು ಹಾರಿಸಿದ್ದರು’ ಎಂದೂ ಅವರು ತಿಳಿಸಿದರು.

‘ಹೆಡ್ ಕಾನ್‌ಸ್ಟೆಬಲ್ ರಂಗನಾಥ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.