
ಕಾರ್ತಿಕ್ ರೆಡ್ಡಿ
ಬೆಂಗಳೂರು: ನಗರ ಸಂಚಾರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ ಅವರು ಆದೇಶಿಸಿದ್ದಾರೆ.
ಕಾನೂನು ಜಾರಿಗೆ ತರುವ ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸದೇ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ಕಂಡುಬರುತ್ತಿವೆ. ಸೀಟ್‌ಬೆಲ್ಟ್/ ಹೆಲ್ಮೆಟ್ ಧರಿಸದೇ ಇರುವುದು ಹಾಗೂ ವಾಹನಗಳನ್ನು ಚಲಾಯಿಸುವ ವೇಳೆ ಮೊಬೈಲ್ ಬಳಕೆ ಮತ್ತಿತರ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಸಂಚಾರ ನಿಯಮಗಳನ್ನು ನಾಗರಿಕರು ಪಾಲನೆ ಮಾಡುವುದರ ಜತೆಗೆ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು–ಸಿಬ್ಬಂದಿ ಸಹ ಪಾಲನೆ ಮಾಡಬೇಕು. ಕಾನೂನು ಜಾರಿಗೊಳಿಸುವ ಸಂಚಾರ ಪೊಲೀಸರೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸಾರ್ವಜನಿಕರಿಗೆ ಹೇಳುವ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಕಾರ್ತಿಕ್ ರೆಡ್ಡಿ ಎಚ್ಚರಿಸಿದ್ದಾರೆ.
‘ನಾವು ಶಿಸ್ತು ಪಾಲಿಸಿದರೆ ನಮ್ಮನ್ನು ಅನುಸರಿಸುವ ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವ ಬಗ್ಗೆ ಶಿಸ್ತು ಮೂಡಿಸುವುದಲ್ಲೇ ಸಂಚಾರ ನಿಯಮಗಳಿಗೆ ಗೌರವವನ್ನೂ ನಿರೀಕ್ಷೆ ಮಾಡಬಹುದಾಗಿದೆ’ ಎಂದು ಹೇಳಿದ್ದಾರೆ.
ನಗರ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ, ವಾಹನವನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು. ಜತೆಗೆ, ಎಲ್ಲ ಸಂಚಾರ ನಿಯಮಗಳನ್ನೂ ಪಾಲಿಸಬೇಕು. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ಕಂಡುಬಂದರೆ, ಅಂತಹ ಸಿಬ್ಬಂದಿಯ ವಿರುದ್ಧ ಐಎಂವಿ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.