ADVERTISEMENT

ಜನವರಿಯಲ್ಲೇ ಪೊಲೀಸರಿಂದ ಅಮೂಲ್ಯಾಗೆ ಎಚ್ಚರಿಕೆ

ವಿಧಾನಸೌಧದ ಬಳಿ ಪ್ರತಿಭಟಿಸಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 19:44 IST
Last Updated 23 ಫೆಬ್ರುವರಿ 2020, 19:44 IST
ವಿಧಾನಸೌಧ ಎದುರು ಜ. 7ರಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಅಮೂಲ್ಯಾಳನ್ನು ವಶಕ್ಕೆ ಪಡೆದಿದ್ದ ಪೊಲೀಸರು – ಪ್ರಜಾವಾಣಿ ಚಿತ್ರ
ವಿಧಾನಸೌಧ ಎದುರು ಜ. 7ರಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದ ಅಮೂಲ್ಯಾಳನ್ನು ವಶಕ್ಕೆ ಪಡೆದಿದ್ದ ಪೊಲೀಸರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ದೇಶದ್ರೋಹ ಆರೋಪದಡಿ ಜೈಲು ಸೇರಿರುವ ಅಮೂಲ್ಯಾ ಲಿಯೋನಾ (19),ವಿಧಾನಸೌಧ ಎದುರು ಜ.7ರಂದು ಪ್ರತಿಭಟನೆ ನಡೆಸಿದ್ದರು. ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದರು.

ಈ ಪ್ರತಿಭಟನೆ ಬಳಿಕವೇ ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದಹೋರಾಟಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಲಾರಂಭಿಸಿದ್ದ ಅಮೂಲ್ಯಾ ತಮ್ಮ ಭಾಷಣದ ಮೂಲಕ ಎಲ್ಲರಿಗೂ ಪರಿಚಿತವಾಗಿದ್ದರು. ಪ್ರತಿಯೊಂದು ಪ್ರತಿಭಟನೆಗೂ ಆಯೋಜಕರು ಅವರನ್ನುಆಹ್ವಾನಿಸುತ್ತಿದ್ದರು. ಇದೀಗ ದೇಶ
ದ್ರೋಹ ಪ್ರಕರಣದ ತನಿಖೆ ನಡೆಸುತ್ತಿರುವ ಪಶ್ಚಿಮ ವಿಭಾಗದ ಪೊಲೀಸರು, ಅಮೂಲ್ಯಾ ವಿಧಾನಸೌಧ ಎದುರು ನಡೆಸಿದ್ದ ಪ್ರತಿಭಟನೆ ಬಗ್ಗೆಮಾಹಿತಿ ಕಲೆಹಾಕುತ್ತಿದ್ದಾರೆ.

‘ವಿಧಾನಸೌಧ ಹಾಗೂ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದ ವೇಳೆಯಲ್ಲೇ ಅಮೂಲ್ಯಾ, ‘ಸಿಎಎ, ಎನ್‌ಆರ್‌ಸಿ ಬೇಡ’ ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಳು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಧಾನಸೌಧ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಆಕೆಯನ್ನು ವಶಕ್ಕೆ ಪಡೆದಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ವಿಚಾರಣೆ ವೇಳೆ ಅಮೂಲ್ಯಾ ವಿದ್ಯಾರ್ಥಿನಿ ಎಂಬುದು ಗೊತ್ತಾಗಿತ್ತು. ‘ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಂಡು ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಅದಾದ ನಂತರವೇ ಆಕೆ ಹೆಚ್ಚಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾಳೆ.ಆ ಕಾರ್ಯಕ್ರಮಗಳ ವಿಡಿಯೊಗಳನ್ನು ಪರಿಶೀಲಿಸಲಾಗುತ್ತಿದೆ. ಅಗತ್ಯಬಿದ್ದರೆ ಆಯೋಜಕರನ್ನುವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದರು.

ಸಿಎಎ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ. 20ರಂದು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಅಮೂಲ್ಯಾ ಅವರಿಗೆ, ಆಯೋಜಕರಲ್ಲೇ ಒಬ್ಬರು ಆಹ್ವಾನ ನೀಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರತಿಭಟನೆಗೆ ಅನುಮತಿ ಪಡೆದಿದ್ದ ಪಾದರಾಯನಪುರ ವಾರ್ಡ್‌ನ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರನ್ನು ಶನಿವಾರ ಆರು ಗಂಟೆಗಳವರೆಗೆ ವಿಚಾರಣೆ ನಡೆಸಿದ್ದ ಪೊಲೀಸರ ವಿಶೇಷ ತಂಡ, ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದೆ. ಇದರ ಆಧಾರದಲ್ಲಿ ಮತ್ತಷ್ಟು ಮಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ‘ನಾನೇ ಕಾರ್ಯಕ್ರಮ ಆಯೋಜನೆ ಮಾಡಿದ್ದೆ. ಆದರೆ, ಅವರಿಗೆ ನಾನು ಆಹ್ವಾನ ಕೊಟ್ಟಿರಲಿಲ್ಲ. ಅವರು ಹೇಗೆ ವೇದಿಕೆಗೆ ಬಂದರು? ಅವಳಿಗೆ ವಿಐಪಿ ಬ್ಯಾಡ್ಜ್‌ ಕೊಟ್ಟವರು ಯಾರು? ಎಂಬುದು ನನಗೂ ಗೊತ್ತಿಲ್ಲ’ ಎಂದು ಇಮ್ರಾನ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.