ADVERTISEMENT

ಮೌಢ್ಯ ನಿಯಂತ್ರಣಕ್ಕೆ ಇಚ್ಛಾಶಕ್ತಿ ಬೇಕು: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 19:51 IST
Last Updated 4 ಮಾರ್ಚ್ 2024, 19:51 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ‘ಮೌಢ್ಯ ಮತ್ತು ಮೂಢನಂಬಿಕೆಗಳನ್ನು ತಡೆಯುವ ಕಾನೂನುಗಳಿವೆ. ಆದರೆ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತದ ಸಂಘ (ಕೆಯುಡಬ್ಲ್ಯುಜೆ) ‘ಮೌಢ್ಯ–ಮೂಢನಂಬಿಕೆ ಮತ್ತು ಮಾಧ್ಯಮ’ ಎಂಬ ವಿಯಷದ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರ ಕಾನೂನು ರೂಪಿಸಬಹುದು. ಆದರೆ, ಅದನ್ನು ಅನುಷ್ಠಾನಕ್ಕೆ ತರುವುದು ಕಾರ್ಯಾಂಗ. ಅಲ್ಲಿಯೂ ಸುಧಾರಣೆ ಅಗತ್ಯ’ ಎಂದರು.

‘ಮುಖ್ಯಮಂತ್ರಿ ಒಬ್ಬರೇ ಮೌಢ್ಯ ಮತ್ತು ಮೂಢನಂಬಿಕೆಗಳನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವಿಲ್ಲ. ಸಚಿವರು, ಶಾಸಕರು, ಅಧಿಕಾರಿಗಳು ಎಲ್ಲರೂ ಕೈಜೋಡಿಸಿದರೆ ಕಾನೂನಿನ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಅಂತಹ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ’ ಎಂದು ಹೇಳಿದರು.

ADVERTISEMENT

‘ಅಂಬೇಡ್ಕರ್‌, ಬುದ್ಧ, ಬಸವಣ್ಣನವರ ವಿಚಾರಧಾರೆಯ ಬೆಳಕಿನಲ್ಲಿ ಉತ್ತಮ ಸಮಾಜ ಕಟ್ಟುವ ಕನಸನ್ನು ಹೊಂದಬೇಕು. ಇಂತಹ ಮಹನೀಯರ ವಿಚಾರಧಾರೆಗಳನ್ನು ಅಧ್ಯಯನ ಮಾಡುವ ಮೂಲಕ ವೈಚಾರಿಕತೆ ರೂಢಿಸಿಕೊಳ್ಳಬೇಕು. ಆಗ ನಮ್ಮ ಮೇಲೆ ಯಾರೂ ಸವಾರಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದರು.

ಭಯ ಅಗತ್ಯವಿಲ್ಲ: ‘ಸ್ಮಶಾನದ ಕುರಿತು ಭಯ ಅಗತ್ಯವಿಲ್ಲ. ಅಲ್ಲಿ ದೆವ್ವವೂ ಇಲ್ಲ, ಪಿಶಾಚಿಯೂ ಇಲ್ಲ. ಸ್ಮಶಾನದಿಂದಲೇ ನಾನು ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ. ಎಲ್ಲವೂ ನಮ್ಮ ನಂಬಿಕೆಯನ್ನು ಆಧರಿಸಿರುತ್ತದೆ’ ಎಂದು ಸಚಿವರು ಹೇಳಿದರು.

ಮೌಢ್ಯ ತೊಲಗಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಮೌಢ್ಯ ಮತ್ತು ಮೂಢನಂಬಿಕೆಗಳನ್ನು ದೂರ ಮಾಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು.

ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.