ADVERTISEMENT

ಮೇವು ಅರಸಿ ಗೋದಾಮು ಹೊಕ್ಕ ಆಮೆ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:57 IST
Last Updated 3 ಜೂನ್ 2019, 13:57 IST
ರಕ್ಷಿಸಲಾದ ಆಮೆ
ರಕ್ಷಿಸಲಾದ ಆಮೆ   

ಬೆಂಗಳೂರು: ಕನಕಪುರ ರಸ್ತೆ ಬಳಿಯ ಸೋಮನಹಳ್ಳಿ ಕೃಷಿಕರೊಬ್ಬರ ಗೋದಾಮಿನಲ್ಲಿ ಕಳೆದ ಕೆಲವು ದಿನಗಳಿಂದ ವಿಚಿತ್ರ ಸದ್ದು ಹೊರಹೊಮ್ಮುತ್ತಿತ್ತು. ಹಾವು–ಗೀವು ಸೇರಿಕೊಂಡಿರಬಹುದು ಎಂಬ ಶಂಕೆಯಿಂದ ಅವರು ‘ಶೇರ್‌ ಹ್ಯಾಬಿಟ್ಯಾಟ್‌’ ತಂಡಕ್ಕೆ ಕರೆ ಮಾಡಿದ್ದರು. ತಂಡದ ವನ್ಯಜೀವಿ ಸಂರಕ್ಷಕರು ಗೋದಾಮನ್ನು ಜಾಲಾಡಿದಾಗ ಅವರಿಗೆ ಸಿಕ್ಕಿದ್ದು ಪುಟ್ಟ ಆಮೆ!

‘ನಮ್ಮ ಗೋದಾಮಿನೊಳಗೆ ಏನೋ ಸೇರಿಕೊಂಡಿದೆ. ಕೆಲವೊಮ್ಮೆ ಹಾವು ಸರಿದಂತಾಗುತ್ತದೆ. ಮಗದೊಮ್ಮೆ ಟಕ್‌ಟಕ್‌ ಎಂದು ಸದ್ದು ಬರುತ್ತದೆ. ನಮಗೆ ಚಿಂತೆ ಶುರುವಾಗಿದೆ ಎಂದು ಕೃಷಿಕ ಶಂಕರ್‌ ಅವರು ಕರೆ ಮಾಡಿ ಹೇಳಿದ್ದರು. ನಮ್ಮ ತಂಡದ ರಶ್ಮಿ ಮಾವಿನಕುರ್ವೆ ಹಾಗೂ ಕಪಿಲ್‌ ಮಾವಿನಕುರ್ವೆ ಅವರೊಂದಿಗೆ ನಾನು ಸ್ಥಳಕ್ಕೆ ಹೋಗಿದ್ದೆ. ಎಷ್ಟು ಹುಡುಕಿದರೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ಒಂದು ಡಬ್ಬದ ಬಳಿ ಟಕ್‌ ಟಕ್‌ ಸದ್ದು ಬಂತು. ಹೋಗಿ ನೋಡಿದರೆ ಅಲ್ಲೊಂದು ಆಮೆ ಇತ್ತು’ ಎಂದು ತಂಡದ ಎಚ್‌.ಎನ್‌.ಸೋಮು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಮೆ ಮನೆ ಅತವಾ ಕಟ್ಟಡದೊಳಗೆ ಬರುವುದು ತೀರಾ ಅಪರೂಪ. ಶಂಕರ್‌ ಅವರ ಗೋದಾಮಿನ ಸಮೀಪದಲ್ಲೇ ಪುಟ್ಟ ಕೆರೆಯೊಂದಿದೆ. ಅದು ಈ ಬಾರಿ ಬೇಸಿಗೆಯಲ್ಲಿ ಬತ್ತಿ ಹೋಗಿದೆ. ಆ ಕೆರೆಯಲ್ಲಿದ್ದ ಆಮೆ ಆಹಾರವನ್ನು ಹುಡುಕಿಕೊಂಡು ಹೊರಗೆ ಬಂದಿದೆ. ಗೋದಾಮಿನ ಬಾಗಿಲು ಮತ್ತು ನೆಲದ ನಡುವೆ ಆರು ಇಂಚುಗಳಷ್ಟು ಅಂತರ ಇದ್ದು, ಅದರ ಮೂಲಕ ಆಮೆ ಸುಲಭವಾಗಿ ಒಳಗೆ ಪ್ರವೇಶಿಸಿದೆ. ಅಲ್ಲಿಟ್ಟಿದ್ದ ಖಾಲಿ ಡಬ್ಬಗಳ ನಡುವೆ ಸಿಲುಕಿದ್ದ ಅದು ಹೊರಗೆ ಬರಲು ಪ್ರಯತ್ನಿಸುತ್ತಿತ್ತು. ಕಬ್ಬಿಣದ ಡಬ್ಬಗಳಿಗೆ ಅದರ ಕವಚ ತಗುಲಿ ಟಕ ಟಕ್ ಸದ್ದು ಬರುತಿತ್ತು’ ಎಂದು ಸೋಮು ವಿವರಿಸಿದರು.

ADVERTISEMENT

‘ಈ ಆಮೆಗೆ ಸುಮಾರು 10 ವರ್ಷ ಆಗಿರಬಹುದು. ಅದಕ್ಕೆ ಆಹಾರವನ್ನು ನೀಡಿ, ಬಳಿಕ ಸೊಂಪುರ ಕೆರೆಯಲ್ಲಿ ಬಿಟ್ಟಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.