ಬೆಂಗಳೂರು: ಮಾಟ ನಿವಾರಣೆ ಹಾಗೂ ನಿಧಿ ಸಿಗುವಂತೆ ಮಾಡುವುದಾಗಿ ನಂಬಿಸಿ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಜಮಾಲ್ ಶಾ ನಗರದ ದಾದಾಪೀರ್ ಅಲಿಯಾಸ್ ವೆಂಕಟರಮಣ ಅಲಿಯಾಸ್ ಲಕ್ಷ್ಮೀ ನಾರಾಯಣ ಎಂಬಾತನನ್ನು ಬಂಧಿಸಿ, ₹53 ಲಕ್ಷ ಮೌಲ್ಯದ 485.4 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯರಸ್ತೆ ಕೋಳಿಫಾರಂ ಗೇಟ್ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
‘ನಾರಾಯಣ, ವೆಂಕಟರಮಣ ಮತ್ತಿತರ ಹೆಸರುಗಳಲ್ಲಿ ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಮಾಟ-ಮಂತ್ರ ನಿವಾರಣೆ ಹಾಗೂ ನಿಧಿ ದೊರಕಿಸಿಕೊಡಲು ಪೂಜೆ ಮಾಡುವುದಾಗಿ ಸ್ವಾಮೀಜಿಯ ಸೋಗಿನಲ್ಲಿ ಅಮಾಯಕರನ್ನು ನಂಬಿಸುತ್ತಿದ್ದ. ಹಲವರು ಪೂಜೆಗೆಂದು ಮನೆಗೆ ಕರೆದೊಯ್ಯುತ್ತಿದ್ದರು. ಪೂಜೆ ವೇಳೆ ಅವರಿಂದ ಪಾತ್ರೆ ಪಡೆದು, ಅದಕ್ಕೆ ಮನೆಯವರ ಚಿನ್ನಾಭರಣಗಳನ್ನು ತುಂಬಿಸುತ್ತಿದ್ದ. ನಂತರ 30 ನಿಮಿಷದ ಪೂಜೆ ಇದೆ ಎಂದು ಹೇಳಿ, ಎಲ್ಲರನ್ನು ಹೊರಗಡೆ ಕಳುಹಿಸಿ, ಚಿನ್ನಾಭರಣಗಳನ್ನು ತನ್ನ ಜೋಳಿಗೆಗೆ ತುಂಬಿಕೊಂಡು, ಪಾತ್ರೆಗೆ ಬಟ್ಟೆ ಸುತ್ತಿ ಕಟ್ಟುತ್ತಿದ್ದ. ಬಳಿಕ ಮನೆಯವರನ್ನು ಕರೆದು, ಒಂದೂವರೆ ತಿಂಗಳವರೆಗೂ ಈ ಪಾತ್ರೆಯ ಬಟ್ಟೆಯನ್ನು ಬಿಚ್ಚಬಾರದು. ಬಳಿಕ ತಾನೇ ಬಂದು ತೆರೆಯುತ್ತೇನೆ ಎಂದು ಹೇಳಿ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದ. ಪರಾರಿಯಾದ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು, ಸಿಮ್ ಕಾರ್ಡ್‌ಗಳನ್ನು ಬದಲಾಯಿಸುತ್ತಿದ್ದ. ಈ ರೀತಿ ಹುಳಿಮಾವು, ಶಿವಮೊಗ್ಗ, ಭದ್ರಾವತಿ, ಹೊಸಕೋಟೆ, ಗಿರಿನಗರ ಹಾಗೂ ಆಂಧ್ರಪ್ರದೇಶದ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಕಳವು ಆಭರಣಗಳ ಪೈಕಿ ಅರ್ಧದಷ್ಟು ಆಭರಣಗಳನ್ನು ಕೋಲಾರದ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ, ಉಳಿದ ಚಿನ್ನಾಭರಣಗಳನ್ನು ನಗರದ ಬಿಟಿಎಂ ಲೇಔಟ್‌ನ ಆಭರಣ ಅಂಗಡಿ ಹಾಗೂ ಮಹಾರಾಷ್ಟ್ರದ ನಾಗಪುರದಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದ. ಎಲ್ಲಾ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬಂಧನದಿಂದ ಹುಳಿ ಮಾವು ಪೊಲೀಸ್ ಠಾಣೆಯ 2, ಭದ್ರಾವತಿ ಪೊಲೀಸ್ ಠಾಣೆ ಹಾಗೂ ಬಳ್ಳಾರಿ ಪೊಲೀಸ್ ಠಾಣೆಯ ತಲಾ ಒಂದು ಕಳವು ಪ್ರಕರಣಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.